ವಿಜಯಪುರ (ಜು.06): ಗುಮ್ಮಟ ನಗರಿ ವಿಜಯಪುರದಲ್ಲಿ ತಡರಾತ್ರಿ ಭೂಕಂಪನವಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಲಘು ಕಂಪನದ ಪರಿಣಾಮ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಗುರುವಾರ ನಸುಕಿನ 1.38 ರ ಸಮಯದಲ್ಲಿ 3.4 ರಷ್ಟು ತೀವ್ರತೆ ಹೊಂದಿದ್ದ ಭೂಕಂಪನ ಸಂಭವಿಸಿದೆ. ವಿಜಯಪುರ ನಗರ, ಐನಾಪುರ, ಕತಕನಹಳ್ಳಿ, ಹಿಟ್ನಳ್ಳಿ ಸೇರಿದಂತೆ ಸುತ್ತಲಿನ ಬಹುತೇಕ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಐನಾಪುರ ಗ್ರಾಮದ ಪರಿಸರದ ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪನದ ಬಿಂದು ಕೇಂದ್ರೀಕೃತವಾಗಿದೆ. ಭೂಕಂಪನ ಘಟನೆ ರಿಕ್ಟರ್ ಮಾಪನ ಕೇಂದ್ರದಲ್ಲಿ ದಾಖಲಾಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ) ದೃಢಪಡಿಸಿದ್ದಾಗಿ ಜಿಲ್ಲಾಡಳಿತ ಖಚಿತಪಡಿಸಿದೆ.
ಭೂಕಂಪನದ ಬಗ್ಗೆ ಜಿಲ್ಲಾಧಿಕಾರಿ ದಾನಮ್ಮನವರ್ ಹೇಳಿದ್ದಿಷ್ಟು: ವಿಜಯಪುರ ಜಿಲ್ಲೆ ಕಪ್ಪು ಶಿಲೆಯಿಂದ ಆವೃತವಾಗಿದ್ದು, ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿದೆ. ಹೀಗಾಗಿ ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿ ಸೃಷ್ಟಿಸುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ್ ತಿಳಿಸಿದ್ದಾರೆ.
ಹಲವು ದಿನಗಳಿಂದ ಜನರನ್ನ ಕಂಗೆಡಿಸಿರುವ ಸರಣಿ ಭೂಕಂಪನ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೇಲಿಂದ ಮೇಲೆ ಕಡಿಮೆ ತೀವ್ರತೆ ಉಳ್ಳ ಭೂಕಂಪನ ಸಂಭವಿಸುತ್ತಿದೆ. ಈ ಬಗ್ಗೆ ಆಗಸ್ಟ್ 23ರಂದು ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ ಜಿಲ್ಲೆಯಲ್ಲಿಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಸುತ್ತಿರುವ ತಾಂತ್ರಿಕ ತಜ್ಞರ ಹಾಗೂ ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಕ್ರೋಡೀಕರಿಸಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
ಕಪ್ಪು ಕಲ್ಲಿನಿಂದ ಆವೃತ್ತವಾಗಿರುವ ವಿಜಯಪುರ ಜಿಲ್ಲೆ: ಪ್ರಸ್ತುತ ಸಾಲಿನಲ್ಲಿ ಅಧಿಕೃತವಾಗಿ 7 ಬಾರಿ ಕಡಿಮೆ ತೀವ್ರತೆಯುಳ್ಳ ಭೂಕಂಪನದ ಅವಲೋಕನ ಕೈಗೊಳ್ಳಲಾಗಿ, ಜಿಲ್ಲೆಯು ಭೌಗೋಳಿಕವಾಗಿ ದಖನ್ ಪ್ರಸ್ಥಭೂಮಿಯಲ್ಲಿದ್ದು, ಈ ಪ್ರದೇಶವು ಅಂದಾಜು ಶೇ.80 ರಷ್ಟು ಬೆಸಾಲ್ಟ್ (ಕಪ್ಪು ಶಿಲೆ)ಶಿಲೆಯಿಂದ ಆವೃತವಾಗಿದ್ದು, ಭಾರತದ ಭೂಕಂಪನ ವಲಯಗಳ ನಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಭೂಸ್ಥರವು ಝೋನ್-2 ಮತ್ತು ಝೋನ್-3 ಪ್ರದೇಶಗಳ ವ್ಯಾಪ್ತಿಯಲ್ಲಿ ಗುರುತಿಸಲಾಗಿರುತ್ತದೆ. ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿರುತ್ತದೆ.
ಜನರು ಭಯ ಪಡುವ ಅವಶ್ಯಕತೆ ಇಲ್ಲ: ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿಯನ್ನು ಸೃಷ್ಟಿಸುವುದಿಲ್ಲ. ಹೀಗಾಗಿ ಈ ಪ್ರದೇಶದ ವ್ಯಾಪ್ತಿಯಲ್ಲಿ ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ಭೂಕಂಪನಸಾಧ್ಯತೆ ಇರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ. ಇದಲ್ಲದೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ತಜ್ಞರ ತಂಡವನ್ನು ಜಿಲ್ಲೆಗೆ ನಿಯೋಜಿಸಲು ಸರ್ಕಾರಕ್ಕೆ ಸಹ ಪತ್ರ ಬರೆಯಲಾಗಿದ್ದು ಶೀಘ್ರವೆ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ವಿಸ್ತೃತವಾಗಿ ಪರಿಶೀಲನೆ ಕೈಗೊಳ್ಳಲಿದೆ.