ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್: ಸುರಂಗ ಮಾರ್ಗ ನಿರ್ಮಿಸಲು ಚಿಂತನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ, ಅನಿಸಿಕೆ, ಸಲಹೆಗಳನ್ನು ಪಡೆಯಲು ಸರ್ಕಾರ ಬ್ರ್ಯಾಂಡ್​ ಬೆಂಗಳೂರು ವೆಬ್ ಪೋರ್ಟಲ್​ ಬಿಡುಗಡೆ ಮಾಡಿದೆ. ಸದ್ಯ ಬ್ರ್ಯಾಂಡ್​ ಬೆಂಗಳೂರಿಗಾಗಿ ರಾಜ್ಯ ಸರ್ಕಾರ ಮಹತ್ವದ ಯೋಜನೆಗೆ ಚಿಂತನೆ ನಡೆಸಿದ್ದು ಬೆಂಗಳೂರು ನಗರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹೊಸ ಪ್ಲ್ಯಾನ್ ಮಾಡಿದೆ.

ನಗರದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಟ್ರಾಫಿಕ್ ಕಿರಿಕಿರಿ ತಪ್ಪಿಸಲು 50 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. 2 ಹಂತದಲ್ಲಿ ಸುರಂಗ ಮಾರ್ಗ ರಸ್ತೆ ನಿರ್ಮಿಸಲು ಪ್ಲ್ಯಾನ್ ನಡೆದಿದೆ. ಮೊದಲ ಹಂತದ ಯೋಜನೆಯಡಿ ಸುಮಾರು 22 ಸಾವಿರ ವೆಚ್ಚದಲ್ಲಿ 50 ಕಿ.ಮೀ ರಸ್ತೆ ನಿರ್ಮಾಣ ಮಾಡಿ ಸುರಂಗ ಮಾರ್ಗವನ್ನು ನಾಲ್ಕು ಅಥವಾ ಆರು ಪಥಗಳಲ್ಲಿ ನಿರ್ಮಿಸಲು ಚಿಂತನೆ ನಡೆದಿದೆ. ಹೆಚ್ಚಿನ ವಾಹನಗಳಿಗೆ ಅವಕಾಶ ಕಲ್ಪಿಸುವ ಹಾಗೂ ಸುರಕ್ಷಾ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತೆ. ಎರಡು ಅಂತಸ್ತಿನಲ್ಲಿ ಸುರಂಗ ಮಾರ್ಗ ಮಾಡಿ, ಕೆಳಭಾಗದಲ್ಲಿ ಒಂದು ಕಡೆಗೆ, ಮೇಲ್ಭಾಗದಲ್ಲಿ ಒಂದು ಕಡೆಗೆ ಹೋಗುವ ರೀತಿ ದಾರಿ ಮಾಡುವ ಪ್ಲ್ಯಾನ್ ಇದಾಗಿದೆ.

ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಹೆಚ್ಚು ಖರ್ಚು ಆಗುತ್ತದೆ. ಕಾಮಗಾರಿ ಸಂದರ್ಭದಲ್ಲಿ ಸಂಚಾರವನ್ನು ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಸುರಂಗ ರಸ್ತೆ ನಿರ್ಮಿಸುವುದು ಸೂಕ್ತ ಎಂದು ಚಿಂತನೆ ನಡೆದಿದೆ. ಈ ಸಂಬಂಧ ಅಧಿಕಾರಿಗಳ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸುರಂಗ ರಸ್ತೆ ನಿರ್ಮಾಣ ಸಲಹಾ ಸಮತಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ತುಮಕೂರು ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸುರಂಗ ಮಾರ್ಗ ನಿರ್ಮಿಸಲು ಚಿಂತನೆ ನಡೆದಿದೆ.

ಇನ್ನು ಜೂನ್ 21 ರಂದು ಸರ್ಕಾರ ಪ್ರತ್ಯೇಕ ವೆಬ್ ಪೋರ್ಟಲ್ www.brandbengaluru.karnataka.gov.in ಬಿಡುಗಡೆ ಮಾಡಿದೆ. ಈ ಪೋರ್ಟಲ್ ಮೂಲಕ ಬೆಂಗಳೂರಿನ ನಾಗರಿಕರು ಹಾಗೂ ಬೇರೆ ರಾಜ್ಯ, ದೇಶ ಮತ್ತು ವಿದೇಶದಲ್ಲಿರುವಂತಹ ಎಲ್ಲ ವರ್ಗದ ನಾಗರಿಕರಿಂದ ಬೆಂಗಳೂರಿನ ಅಭಿವೃದ್ಧಿಗಾಗಿ ಸಲಹೆ ಪಡೆಯುವ ಉದ್ದೇಶ ಹೊಂದಿದೆ.

ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಸೇರಿದಂತೆ ಏಳು ವಿಚಾರಗಳ ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಸಲಹೆಗಳನ್ನು ನೀಡಲು ಸರ್ಕಾರ ನಾಗರಿಕರಿಗೆ ಸೂಚಿಸಿದೆ. ಜುಲೈ 15ರವೆರೆಗೆ ಯಾರು ಬೇಕಾದ್ರು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅನಿಸಿಕೆ, ಸಲಹೆಗಳನ್ನು ನೀಡಬಹುದು.