ಬೆಂಗಳೂರಿಗರಿಗೆ ಪಾರ್ಕಿಂಗ್ ತಲೆನೋವು; ಪಾರ್ಕಿಂಗ್ ಇಲ್ಲದ ಮನೆಗಳ ಕೇಳೋರಿಲ್ಲವಾ?

ಬೆಂಗಳೂರು: ಅಗಾಧವಾಗಿ ಮತ್ತು ಹುಚ್ಚುಚ್ಚಾಗಿ ಬೆಳೆದಿರುವ ಸಿಲಿಕಾನ್ ಸಿಟಿಯಲ್ಲಿ ಪಾರ್ಕಿಂಗ್  ಸಮಸ್ಯೆ  ವಿಪರೀತ ಎಂಬುದು ಇಲ್ಲಿನ ಎಲ್ಲಾ ನಿವಾಸಿಗಳಿಗೂ ಗೊತ್ತಿರುವ ಸಂಗತಿ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮನೆ ಬಳಿ ವಾಹನ ನಿಲ್ಲಿಸಲೂ ಜಾಗವಿಲ್ಲದಂತಾಗಿದೆ. ಅದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು, ವಾಹನಗಳ ಸಂಖ್ಯೆ ವಿಪರೀತ ಏರಿರುವುದು. ಇನ್ನೊಂದು, ಕಟ್ಟಡಗಳಲ್ಲಿ ಮನೆಗಳ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ಪ್ರದೇಶ ನಿರ್ಮಿಸದಿರುವುದು. 2010ಕ್ಕೆ ಮುಂಚೆ ಕಟ್ಟಿದ ಬಹಳಷ್ಟು ಅಪಾರ್ಟ್ಮೆಂಟ್​ಗಳಲ್ಲಿ ಸಾಕಷ್ಟು ಪಾರ್ಕಿಂಗ್ ಇಲ್ಲದಿರುವುದರಿಂದ ಅನೇಕ ನಿವಾಸಿಗಳು ತಮ್ಮ ವಾಹನವನ್ನು ಮನೆ ಮುಂದಿನ ರಸ್ತೆಬದಿಯಲ್ಲಿ ನಿಲ್ಲಿಸುತ್ತಾರೆ. ಇಲ್ಲದಿದ್ದರೆ ಎಲ್ಲಿ ಜಾಗ ಇದೆಯೋ ಅಲ್ಲಿ ಹೋಗಿ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಬೆಂಗಳೂರಿನ ವಾಸಪ್ರದೇಶಗಳಲ್ಲಿ ಪಾರ್ಕಿಂಗ್ ವಿಚಾರವಾಗಿ ತಿಕ್ಕಾಟ, ಜಗಳಗಳು ಸಾಮಾನ್ಯವಾಗಿಹೋಗಿವೆ.

ಬೆಂಗಳೂರಿನಲ್ಲಿ ಪಾರ್ಕಿಂಗ್ ಸೌಲಭ್ಯ ಇರುವ ಮನೆಗಳಿಗೆ ಭಾರೀ ಡಿಮ್ಯಾಂಡ್ ಇದೆ. ಪಾರ್ಕಿಂಗ್ ಸೌಲಭ್ಯ ಇಲ್ಲದ ಅಪಾರ್ಟ್ಮೆಂಟ್​ಗಳ ಮೌಲ್ಯ ಗಣನೀಯವಾಗಿ ಇಳಿಯುತ್ತಿದೆ. ಒಂದು ವರದಿ ಪ್ರಕಾರ ಪಾರ್ಕಿಂಗ್ ಸ್ಥಳವಾಕಾಶ ಇಲ್ಲದ ಅಪಾರ್ಟ್ಮೆಂಟ್​ಗಳ ಬೆಲೆ ಮತ್ತು ಬಾಡಿಗೆ ದರ ಶೇ. 15ರಿಂದ 20ರಷ್ಟು ಕಡಿಮೆ ಆಗಿದೆಯಂತೆ.

ಐಟಿ ಕಂಪನಿಗಳು ಹೆಚ್ಚು ಇರುವ ಪ್ರದೇಶಗಳ ಸುತ್ತಮುತ್ತ ಸರಿಯಾದ ಪಾರ್ಕಿಂಗ್ ಸೌಲಭ್ಯ ಹೊಂದಿರುವ ಎರಡು ಬೆಡ್​ರೂಂ (2ಬಿಎಚ್​ಕೆ) ಮನೆ ಅಥವಾ ಫ್ಲಾಟ್​ಗೆ ಬಾಡಿಗೆ ತಿಂಗಳಿಗೆ ಸುಮಾರು 40,000 ರೂ ಇದೆ. ಅದೇ ಪಾರ್ಕಿಂಗ್ ಇಲ್ಲದೇ ಇರುವ ಮನೆ ಬಾಡಿಗೆ 18,000 ರೂ ಇದೆ. 1 ಕೋಟಿ ರೂ ಮೌಲ್ಯದ ಅಪಾರ್ಟ್ಮೆಂಟ್​ಗಳನ್ನು ಮಾರಲು ಹೋದರೆ ಪಾರ್ಕಿಂಗ್ ಕೊರತೆಯಿಂದಾಗಿ 80 ಲಕ್ಷ ರೂಗೂ ಖರೀದಿಸುವವರಿಲ್ಲದಂತಾಗಿದೆ ಎಂದು ಬೆಂಗಳೂರಿನ ಬ್ರೋಕರ್​ವೊಬ್ಬರು ಹೇಳುತ್ತಾರೆ.

ಖಾಲಿ ನಿವೇಶನಗಳು ಹೆಚ್ಚು ಇರುವ ಹೊಸ ಪ್ರದೇಶಗಳಲ್ಲಿ ಸದ್ಯಕ್ಕೆ ಈ ಸಮಸ್ಯೆ ಇಲ್ಲ. ಬೆಂಗಳೂರಿಗರು ಇಲ್ಲಿ ಹೇಗೋ ಪಾರ್ಕಿಂಗ್ ಸ್ಥಳ ಹೊಂದಿಸಿಕೊಳ್ಳುತ್ತಾರೆ. ಆದರೆ ಖಾಲಿ ಸ್ಥಳಗಳು ಇಲ್ಲದ ಮತ್ತು ಪಾರ್ಕಿಂಗ್ ಇಲ್ಲದೇ ನಿರ್ಮಿಸಿದ ದೊಡ್ಡ ದೊಡ್ಡ ಕಟ್ಟಡಗಳಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ವಿಪರೀತ.

ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಮುಂದೆ ಒಂದು ಪ್ರಸ್ತಾಪ ಇತ್ತು. ಮನೆ ಬಳಿ ಪಾರ್ಕಿಂಗ್ ಸ್ಥಳಕ್ಕೆ ಜಾಗ ಇಲ್ಲದಿದ್ದರೆ ಅಂಥವರಿಗೆ ಕಾರು ಖರೀದಿಸಲು ಅವಕಾಶ ಕೊಡದಿರುವ ಕಾನೂನೊಂದನ್ನು ತರಲು ಆರ್​ಟಿಒ ಯೋಜಿಸಿತ್ತು. ಈ ಯೋಜನೆ ಪ್ರಕಾರ ಕಾರು ಖರೀದಿಸುವವರು ವಾಹನ ಪಾರ್ಕಿಂಗ್ ಸಂಬಂಧ ಬಿಬಿಎಂಪಿಯಿಂದ ಎನ್​ಒಸಿ ಪಡೆಯಬೇಕು ಎಂಬ ಕಾನೂನನ್ನು ತರುವ ಉದ್ದೇಶವಿತ್ತು.