ಸಂಪಾಜೆಯ ಕೊಯನಾಡು ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ

ಮಡಿಕೇರಿ: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಕೊಡಗು-ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖೆ ಕಛೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ.

ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಬಾರಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ- ಕೊಡಗು ಗಡಿಭಾಗದಲ್ಲಿ ಮಳೆ ಬಿರುಸು ಪಡೆದಿದೆ. ಈ ಹಿನ್ನೆಲೆ ಕಳೆದ ಮಳೆಗಾಲ ಸಮಯದಲ್ಲೇ ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟಿತ್ತು. ಆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬದಿಯಲ್ಲೇ ಮತ್ತೊಂದು ರಸ್ತೆಯನ್ನು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ನಿದ್ರಾಹೀನ ಸ್ಥಿತಿಯಲ್ಲಿ ಇರುವುದರಿಂದ ಮತ್ತೊಮ್ಮೆ ಎರಡು ಜಿಲ್ಲೆಯ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷದ ಮಳೆಗಾಲದಲ್ಲಿ ಈ ಪ್ರದೇಶದ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಬಂದ್ ಮಾಡಿ, ನೆಪಮಾತ್ರಕ್ಕೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವ ನಾಮಫಲಕ ಹಾಕಿ ಮುಖ್ಯ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ತಾತ್ಕಾಲಿಕ ರಸ್ತೆಯಲ್ಲಿಯೇ ಕಳೆದೊಂದು ವರ್ಷದಿಂದ ವಾಹನ ಸಂಚಾರ ನಡೆಯುತ್ತಿತ್ತು. ಆದರೆ ಎರಡು ತಿಂಗಳ ಬಳಿಕ ಮುಖ್ಯ ರಸ್ತೆಗೆ ಇರಿಸಿದ್ದ ಬ್ಯಾರಿಕೇಡ್ ತೆಗೆದಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ವಾಣಿಜ್ಯ ಸಂಬಂಧಿಸಿದಂತೆ ಭಾರೀ ವಾಹನಗಳು ಹಾಗೂ ಸರ್ಕಾರಿ ಬಸ್ಸುಗಳು ಹೆದ್ದಾರಿಯಲ್ಲಿ ಸಂಚಾರ ನಡೆಸುತ್ತಿದ್ದವು. 

ಇದೀಗ ಮತ್ತೆ ಮುಖ್ಯ ರಸ್ತೆ ಬಂದ್ ಮಾಡಲಾಗಿದ್ದು, ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿದೆ. ಒಂದುವೇಳೆ ಮಳೆ ಹೆಚ್ಚಾಗಿ ರಸ್ತೆ ಸಂಪೂರ್ಣವಾಗಿ ಕುಸಿದರೆ ಎರಡೂ ಜಿಲ್ಲೆಗಳ ಸಂಪರ್ಕ ಕಡಿತಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.