30 ವರ್ಷ ಗಡಿಯಲ್ಲಿ ಸೇವೆ ಸಲ್ಲಿಸಿ ತವರಿಗೆ ವಾಪಸ್ಸಾದ ವೀರಯೋಧನಿಗೆ ಅದ್ಧೂರಿ ಸ್ವಾಗತ

ಹುಬ್ಬಳ್ಳಿ: ವಂದೇ ಮಾತರಂ, ಬೋಲೋ ಭಾರತ್ ಮಾತಾ ಕೀ ಜೈ.. ಇಂಕ್ವಿಲಾಬ್ ಜಿಂದಾಬಾದ್.. ಎಲ್ಲೆಲ್ಲೂ ಜೈಕಾರ, ಘೋಷಣೆ. ತವರಿಗೆ ಬಂದ ವೀರ ಯೋಧನನ್ನ ಊರ ಮಂದಿ ಸ್ವಾಗತಿಸಿದ ಪರಿಯಿದು. ಭಾರತ ಮಾತೆಯ ಪುತ್ರನೇ ನಿನಗಿದೋ ನಮ್ಮೀ ಹೆಮ್ಮೆಯ ಸ್ವಾಗತವೆನ್ನುತ್ತಾ ಬರಮಾಡಿಕೊಂಡ ರೀತಿಯಿದು.

ಹೀಗೊಂದು ಅದ್ಭುತ ಸ್ವಾಗತ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ. ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ತವರಿಗೆ ಆಗಮಿಸಿದ ಶಿರಗುಪ್ಪಿಯ ಗುರುಪಾದಪ್ಪ, ಸಂಗಪ್ಪ ಯರಗುಪ್ಪಿ ಅವರಿಗೆ ಊರಿನಲ್ಲಿ ಹೃದಯಸ್ಪರ್ಶಿ ಸ್ವಾಗತ ಮಾಡಲಾಯ್ತು. ಹಿರಿಯರು, ಕಿರಿಯರೆನ್ನದೇ ವೀರಯೋಧನನ್ನು ಬರಮಾಡಿಕೊಂಡರು.

ಶಾಲಾ ಮಕ್ಕಳಂತೂ ಸಾಲಾಗಿ ನಿಂತು ತೆರೆದ ಜೀಪಿನಲ್ಲಿ ಆಗಮಿಸಿದ ಭಾರತೀಯ ಹೆಮ್ಮೆಯ ಪುತ್ರನಿಗೆ ಪುಷ್ಪ ಮಳೆಗರೆದು ಸ್ವಾಗತಿಸಿದ್ರು. ತವರೂರಿನ ಈ ಸ್ವಾಗತ ಕಂಡು ಒಂದು ಕ್ಷಣ ಗುರುಪಾದಪ್ಪನವರು ಭಾವುಕರಾದರು.