ಮತ್ತೊಂದು ಭೀಕರ ಅಪಘಾತದಲ್ಲಿ 10 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹೆದ್ದಾರಿಯಲ್ಲಿ ಟ್ರಕ್‌ವೊಂದು ಹೋಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಟ್ರಕ್‌ನ ಬ್ರೇಕ್ ವಿಫಲವಾಗಿದ್ದರಿಂದ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಅತೀ ವೇಗದಲ್ಲಿ ಚಲಿಸುತ್ತಿದ್ದ ಟ್ರಕ್‌ ಹಿಂಬದಿಯಿಂದ ಎರಡು ದ್ವಿಚಕ್ರವಾಹನ, ಒಂದು ಕಾರು ಹಾಗೂ ಇನ್ನೊಂದು ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಟ್ರಕ್ ಹೆದ್ದಾರಿಯಲ್ಲಿ ಬಸ್ ನಿಲ್ದಾಣದ ಬಳಿ ಹೋಟೆಲ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಟ್ರಕ್‌ ಮಧ್ಯಪ್ರದೇಶದಿಂದ ಧುಲೆ ಕಡೆಗೆ ಹೋಗುತ್ತಿತ್ತು. ಇದೇ ಮಾರ್ಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಕೆಲವರು ಅಪಘಾತಕ್ಕೀಡಾಗಿದ್ದಾರೆ. 

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನ ಶಿರ್‌ಪುರ ಮತ್ತು ಧುಲೆ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.