ಬೆಂಗಳೂರು: ಬಿಜೆಪಿ ಕಾಲದ ಬಿಟ್ ಕಾಯಿನ್ ಹಗರಣದ ವಿರುದ್ಧ ಮರು ತನಿಖೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ತನಿಖೆಗೆ ಎಸ್‍ಐಟಿ (SIT ) ರಚನೆ ಮಾಡಲಾಗಿದ್ದು, ತನಿಖೆ ಮಂಗಳವಾರದಿಂದಲೇ ಪ್ರಾರಂಭಗೊಳ್ಳಲಿದೆ.
ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ಈಗಾಗಲೇ ಎಸ್‍ಐಟಿಯನ್ನು ರಚನೆ ಮಾಡಲಾಗಿದೆ. ಸಿಐಡಿ ಸೈಬರ್ ಸೆಲ್‍ನ ಎಸ್ಪಿ ಶರತ್ ಪ್ರಕರಣದ ತನಿಖಾಧಿಕಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಿಟ್ ಕಾಯಿನ್ ಹಗರಣವನ್ನು ಈ ಹಿಂದೆ ಸಿಸಿಬಿ ತನಿಖೆ ಮಾಡಿತ್ತು. ಆಗ ತನಿಖೆಯಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ರಾಜಕಾರಣಿಗಳು ಹಣ ತನಿಖೆಯ ದಾರಿ ತಪ್ಪಿಸಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಸಿಐಡಿ ಡಿಜಿ ಸಲೀಂ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ್ದಾರೆ. ಎಸ್‍ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಜೊತೆ ಮಾತುಕತೆ ನಡೆಸಿದ ಅವರು, ತನಿಖೆಯ ರೂಪುರೇಷೆ, ಫೈಲ್ ವರ್ಗಾವಣೆ, ಕೆಳ ಹಂತದಲ್ಲಿ ಯಾವೆಲ್ಲ ಅಧಿಕಾರಿಗಳು ಟೀಂನಲ್ಲಿ ಇರಬೇಕು ಎಂಬುದನ್ನು ಚರ್ಚಿಸಿದ್ದಾರೆ. ಈ ಹಿಂದಿನ ತನಿಖೆಯಲ್ಲಿ ಸಿಸಿಬಿಯಿಂದ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಇದರಿಂದಾಗಿ ಎಸ್‍ಐಟಿ ತನಿಖೆ ನಡೆಸಲು ಕೋರ್ಟ್‍ನಿಂದ ಅನುಮತಿ ಪಡೆಯಬೇಕಿದೆ. ಈ ಬಗ್ಗೆ ಸಿದ್ಧತೆ ನಡೆಸಲಾಗಿದೆ.
ಸಿಸಿಬಿಯಿಂದ ಫೈಲ್‍ಗಳ ವರ್ಗಾವಣೆ ಕೋರಿ ಪತ್ರ ಬರೆಯುವಂತೆ ಸಹ ಸೂಚಿಸಲಾಗಿದೆ. ಸಿಸಿಬಿಯ ತನಿಖಾ ಫೈಲ್ ಎಸ್‍ಐಟಿ ಕೈ ಸೇರಿದ ಬಳಿಕ ಮಂಗಳವಾರ ಅಥವಾ ಬುಧವಾರದಿಂದ ಅಧಿಕೃತವಾಗಿ ಎಸ್‍ಐಟಿ ತನಿಖೆ ಆರಂಭಿಸಲಿದೆ.