ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕೊಡಚಾದ್ರಿ ಬೆಟ್ಟವು ತನ್ನದೇ ಆದ ಪ್ರಾಕೃತಿಕ ಪರಂಪರೆಯನ್ನು ಹೊಂದಿರುವ ತಾಣವಾಗಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವ ಇಲ್ಲಿನ ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ.

ಪುರಾತನ ಕಾಲದಿಂದಲೂ ಜನ ಕೊಡಚಾದ್ರಿಗೆ ಜನ ಹೋಗುತ್ತಿದ್ದರಂತೆ. ಈ ಸ್ಥಳಕ್ಕೆ ಕ್ರಿ.ಶ 7ನೇ ಶತಮಾನದಲ್ಲಿ ಶಂಕರಾಚಾರ್ಯರು    ಭೇಟಿ ಕೊಟ್ಟಿದ್ದರು. ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಠೆ ಮಾಡಿದರು ಎಂದು ಇತಿಹಾಸ ಹೇಳುತ್ತದೆ.

ಆಕರ್ಷಣೀಯ ಸ್ಥಳಗಳು: ನಾಗರ ಕೋಟೆ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಸಿಂಗದೂರು ದೇವಾಲಯ ಮತ್ತು ಜೋಗ್ ಜಲಪಾತ ಇವೆಲ್ಲವೂ ಕೊಡಚಾದ್ರಿ ಸಮೀಪದಲ್ಲಿರುವ ಪ್ರವಾಸಿ ಆಕರ್ಷಣೀಯ ಸ್ಥಳಗಳಾಗಿವೆ.

ಇಷ್ಟು ಮಾತ್ರವಲ್ಲದೇ ಇಲ್ಲಿನ ತಂಪಾದ ಗಾಳಿ, ಪ್ರಕೃತಿಯ ಸೌಂದರ್ಯ, ಆಧ್ಯಾತ್ಮವನ್ನು ಇಮ್ಮಡಿಗೊಳಿಸುವ ಶ್ರೀ ಶಂಕರಾಚಾರ್ಯರ ಸರ್ವಜ್ಞ ಪೀಠ, ಗಣಪತಿ ಗುಹೆ ಅದ್ಭುತವಾದುದು. ನವವಧುವಿನಂತೆ ಸಿಂಗಾರಗೊಂಡಿರುವಂತೆ ಈ ಕೊಡಚಾದ್ರಿಯು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಡಚಾದ್ರಿ ಟ್ರಕ್ಕಿಂಗ್ ಹೋಗುವ ಪ್ಲಾನ್ ಇದ್ದರೆ ಗಣೇಶ ಗುಹೆಗೂ ಒಂದು ಬಾರಿ ಭೇಟಿ ಕೊಡಬಹುದು. ಆದಿ ಶಂಕರಾಚಾರ್ಯರು ಧ್ಯಾನ ಮಾಡಿದ್ದಾರೆಂದು ಹೇಳಲಾಗುತ್ತಿರುವ ಗಣೇಶ ಗುಹೆ ಬೆಟ್ಟದ ಮೇಲಿದೆ. ಇದರ ಜೊತೆ ಸರ್ವಜ್ಞ ಪೀಠ ನೋಡಲೇಬೇಕಾದ ತಾಣವಾಗಿದೆ.

ಹೀಗೆ ಟ್ರೆಕ್ಕಿಂಗ್ ಮಾಡಿ ಕೊಡಚಾದ್ರಿಯಿಂದ 5 ಕಿ.ಮೀ ದೂರ ಇರುವ ಹಿಡ್ಲುಮನೆ ಜಲಪಾತವನ್ನೂ ನೋಡಬಹುದಾಗಿದೆ. ಜೊತೆಗೆ ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದು ಈ ಚಾರಣದಲ್ಲಿ ಮರೆಯಲಾಗದ ಒಂದು ಅತ್ಯದ್ಭುತ ಅನುಭವವಾಗಿರುತ್ತದೆ. ಒಟ್ಟಿನಲ್ಲಿ ಬೆಟ್ಟದ ತುದಿಯವರೆಗೆ ಟ್ರೆಕ್ಕಿಂಗ್ ಹೋಗಲು ಎಲ್ಲೆಡೆಯಿಂದಲೂ ಜನ ಬರುತ್ತಿರುತ್ತಾರೆ.

ಕೊಡಚಾದ್ರಿಗೆ ಹೋಗುವುದು ಹೇಗೆ?: ಸಿಲಿಕಾನ್ ಸಿಟಿಯಿಂದ ಕೊಡಚಾದ್ರಿ ಸುಮಾರು 430 ಕಿ.ಮೀ ದೂರದಲ್ಲಿದೆ. ಹೀಗಾಗಿ ಬೆಂಗಳೂರಿನಿಂದ ಕೊಡಚಾದ್ರಿಗೆ ಬಸ್ಸು, ಖಾಸಗಿ ವಾಹನದ ಮೂಲಕ ಹೊರಡಬಹುದು. ವಿಮಾನದ ಮೂಲಕ ಮಂಗಳೂರಿಗೆ ತೆರಳಿದರೆ ಸಮೀಪವಾಗುತ್ತದೆ. ಮಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿ ಕೊಡಚಾದ್ರಿ ಇದೆ. ಮಂಗಳೂರು ಹಾಗೂ ಕೊಲ್ಲೂರಿನ ನಡುವೆ ಹಲವಾರು ಖಾಸಗಿ ಬಸ್ಸುಗಳಿವೆ.

ಗುಂಪು ಟ್ರೆಕ್ಕಿಂಗ್ ಮಾಡಲು ಕೊಡಚಾದ್ರಿ ಬೆಸ್ಟ್ ಪ್ಲೆಸ್ ಆಗಿರುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ. ಆದರೆ ಮಳೆಗಾಲದಲ್ಲಿ ಜಿಗಣೆ ಮತ್ತು ಕಡಿದಾದ ಇಳಿಜಾರು ಇರುವುದರಿಂದ ಸ್ವಲ್ಪ ಜಾಗೃತೆ ವಹಿಸಿಕೊಳ್ಳಬೇಕು. ಜೀಪಿನಲ್ಲಿ ತೆರಳಿದರೆ ಈ ಟ್ರಕ್ಕಿಂಗ್‍ನ ಮಜಾನೇ ಬೇರೆಯಾಗಿರುತ್ತದೆ.

ಉಳಿದುಕೊಳ್ಳಲು ವ್ಯವಸ್ಥೆ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೊಡಚಾದ್ರಿ ಸಮೀಪ ಪ್ಯಾರಡೈಸ್ ವೈಲ್ಡ್ ಹಿಲ್ ರೆಸಾರ್ಟ್ ನಡೆಸುತ್ತಿದೆ. ಅಲ್ಲದೆ ಹತ್ತಿರದ ಪಟ್ಟಣವಾದ ಕೊಲ್ಲೂರಿನಲ್ಲಿ ಹೋಟೆಲ್‍ಗಳು ಮತ್ತು ಹೋಂ ಸ್ಟೇಗಳು ಲಭ್ಯವಿದೆ.