ಶ್ರಮದಿಂದ ಸಾಧನೆ ಸಾಧ್ಯ : ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ರೋಷನ್

ಹಳಿಯಾಳ : ಜೀವನದಲ್ಲಿ ಸಫಲತೆ, ಯಶಸ್ಸು ಪುಕ್ಕಟೆ ಸಿಗುವ ವಸ್ತುವಲ್ಲ. ಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಹಾಗೂ ಜೀವನದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯ. ಶ್ರಮವಿಲ್ಲದ ಜೀವನ ವ್ಯರ್ಥ್ಯ. ಬಸವಣ್ಣನವರು ಹೇಳಿದಂತೆ ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಶ್ರಮವಿದ್ದಲ್ಲಿ ಫಲ ಸಾಧ್ಯ ಎನ್ನುವುದನ್ನು ಎಲ್ಲರು ಅರಿತು ಅದರಂತೆ ನಡೆದುಕೊಂಡಾಗ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ. ಈ ರಾಷ್ಟ್ರ ನಮಗೆ ಆಸ್ತಿಯಾಗುವುದಕ್ಕಿಂತ ನಾವು ಈ ರಾಷ್ಟ್ರದ ಆಸ್ತಿಗಳಾಗಬೇಕು. ಅಂತಹ ಜೀವನ ಕ್ರಮ ನಮ್ಮಗದಾಗಬೇಕು. ಈ ನಿಟ್ಟಿನಲ್ಲಿ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಶಕ್ತಿಯುತ ಸಮಾಜ ನಿರ್ಮಾಣದ ಆಶಯದೊಂದಿಗೆ ಸ್ಮರಣೀಯ ಕಾರ್ಯವನ್ನು ಮಾಡುತ್ತಿದೆ ಎಂದು ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ರೋಷನ್ ಅವರು ನುಡಿದರು.

ಅವರು ಹಳಿಯಾಳ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಭಾಭವನದಲ್ಲಿ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ವಿಶೇಷ ಸಾಧಕರಿಗೆ ಸನ್ಮಾನಿಸಿ ಮಾತನಾಡುತ್ತಿದ್ದರು.
ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಧರ್ಮದರ್ಶಿ ಪ್ರಸಾದ್ ದೇಶಪಾಂಡೆಯವರು ಮಾತನಾಡಿ ಶ್ರೀ.ವಿ.ಆರ್.ದೇಶಪಾಂಡೆಯವರ ಸ್ಮರಣೆಯೊಂದಿಗೆ ಆರಂಭವಾದ ಈ ಸಂಸ್ಥೆ ಆರ್.ವಿ.ದೇಶಪಾಂಡೆಯವರ ಕನಸಿನ ಕೂಸು. ಒಂದು ಸ್ಪಷ್ಟ ಉದ್ದೇಶದೊಂದಿಗೆ ಆರಂಭವಾದ ಈ ಸಂಸ್ಥೆ ಸಮಾಜಮುಖಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.

ವೇದಿಕೆಯಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಟ್ರಸ್ಟಿ ಶ್ಯಾಮ್ ಕಾಮತ್, ಸಂಸ್ಥೇಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್, ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಇಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸರ್ಕಾರವನ್ನು ನೀಡಿ ಗೌರವಿಸಲಾಯ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರೀಡಾಪಟು ಮುಂಡಗೋಡ ತಾಲ್ಲೂಕಿನ ನಯನಾ ಕೋಕರೆ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟು ಮುಂಡಗೋಡ ತಾಲ್ಲೂಕಿನ ಅರ್ಚನಾ ಮಿಂಗಲ್ ಸಿದ್ದಿ, ಭಾರತೀಯ ಸೈನ್ಯಕ್ಕೆ 11 ನಾಯಿ ಶ್ವಾನ ಮರಿಗಳನ್ನು ನೀಡಿದ ಅಂಕೋಲಾದ ರಾಘವೇಂದ್ರ ಭಟ್ ಅವರನ್ನು ಮತ್ತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೇರಣೆಯಾದ ಜಿಲ್ಲೆಯ ಕ್ರೀಡಾ ತರಬೇತುದಾರರನ್ನು ಸನ್ಮಾನಿಸಲಾಯ್ತು.

ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ್ ಪ್ರಭು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಡಿ ಶಾಲೆಯ ಪ್ರಾಚಾರ್ಯರಾದ ಡಾ.ಸಿ.ಬಿ.ಪಾಟೀಲ್ ಅವರು ವಂದಿಸಿದರು.