ದಾಂಡೇಲಿ : ನಗರದ ಇನ್ನರ್ ವೀಲ್ ಕ್ಲಬಿನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಭಾನುವಾರ ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಜರುಗಿತು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿ ಮಾತನಾಡಿದ ಇನ್ನರ್ ವೀಲ್ ಕ್ಲಬಿನ ಮಾಜಿ ಜಿಲ್ಲಾ ಚೇರ್ಮೆನ್ ಲತಾ ಜಮಖಂಡಿಯವರು ಇನ್ನರ್ ವೀಲ್ ಕ್ಲಬಿನಿಂದ ಸಾಮಾಜಿಕ ಕೈಂಕರ್ಯದ ಜೊತೆಗೆ ನಾವು ಹಾಗೂ ನಮ್ಮ ವ್ಯಕ್ತಿತ್ವವು ಬೆಳೆಯಲು ಸಾಧ್ಯ. ನೂತನ ಪದಾಧಿಕಾರಿಗಳು ಉತ್ತಮ ಕಾರ್ಯದ ಮೂಲಕ ಇನ್ನರ್ ವೀಲ್ ಕ್ಲಬಿಗೆ ಮತ್ತಷ್ಟು ಗೌರವ, ಘನೆತಯನ್ನು ತಂದುಕೊಡುವ ನಿಟ್ಟಿನಲ್ಲಿ ಮುಂದಡಿಯಿಡಬೇಕೆಂದು ಕರೆ ನೀಡಿದರು.
ಇನ್ನರ್ ವೀಲ್ ಕ್ಲಬಿನ ನಿರ್ಗಮಿತ ಅಧ್ಯಕ್ಷೆ ನೇಹಾ ಕಾಮತ್ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ಉತ್ತಮ ಸೇವೆ ಮಾಡಲು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ನೂತನ ಅಧ್ಯಕ್ಷೆ ರೇಷ್ಮಾ ಬಾವಾಜಿಯವರು ಸರ್ವರ ಸಹಕಾರ ಯಾಚಿಸಿ ಮಾತನಾಡಿದರು.
ವೇದಿಕೆಯಲ್ಲಿ ಇನ್ನರ್ ವೀಲ್ ಕ್ಲಬಿನ ಪ್ರಮುಖರಾದ ಡಾ.ಜ್ಯೋತಿ ಪಾಟೀಲ್, ನಿಕಟಪೂರ್ವ ಕಾರ್ಯದರ್ಶಿ ಶ್ವೇತಾ ಜಾಧವ್, ನಿಕಟಪೂರ್ವ ಖಜಾಂಚಿ ಮಲ್ಲಿಕಾ ಪ್ರಕಾಶ್ ಶೆಟ್ಟಿ, ನಿಕಟಪೂರ್ವ ಐ.ಎಸ್.ಓ ಡಾ.ತೃಪ್ತಿ ನಾಯಕ ಮೊದಲಾದವರು ಉಪಸ್ಥಿತರಿದ್ದರು.
ನೇಹಾ ಕಾಮತ್ ಸ್ವಾಗತಿಸಿದರು. ಶ್ವೇತಾ ಜಾಧವ್ ವಾರ್ಷಿಕ ವರದಿ ಮಂಡಿಸಿದರು. ಪ್ರೇಮಾ ಬಾವಾಜಿಯವರು ಅತಿಥಿಗಳನ್ನು ಹಾಗೂ ಕೀರ್ತಿ ಅರುಣಾದ್ರಿ ರಾವ್ ಅವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಡಾ.ಭಾವನಾ ಅಂಕೋಲೆಕರ ವಂದಿಸಿದರು. ನೂತನ ಖಜಾಂಚಿ ಜ್ಯೋತಿ ಕಲ್ಲಣ್ಣನವರ್, ನೀಲಾಂಬಿಕಾ ಕಣಿವೆಹಳ್ಳಿ ಮತ್ತು ರಶ್ಮಿ ನಾಯ್ಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.