ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಕಾಲಿಟ್ಟಿದ್ದರೂ, ಅಂದುಕೊಂಡಷ್ಟು ಮಳೆಯಾಗುತ್ತಿಲ್ಲ. ಇದರಿಂದ ರೈತ ಕಂಗಾಲ ಆಗಿದ್ದು, ತಾನು ಅಂದುಕೊಂಡಷ್ಟು ಇಳುವರಿ ಬಾರದೆ ನಷ್ಟ ಅನುಭವಿಸುತ್ತಿದ್ದಾನೆ. ಇದರಿಂದ ಮಾರುಕಟ್ಟೆಗೆ ಸಮರ್ಪಕವಾಗಿ ತರಕಾರಿ ಬಾರದ ಹಿನ್ನೆಲೆ ಬೆಲೆಗಳು ಗಗನಕ್ಕೆ ಏರುತ್ತಿವೆ. ಈಗಾಗಲೆ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ ದಿನಸಿ ಸಾಮಗ್ರಿಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೇ ಈ ವಾರ ದಿನಸಿ ಸಾಮಗ್ರಿಗಳ ಬೆಲೆ 5 ರಿಂದ 10 ರುಪಾಯಿ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 50 ರೂ ಇದ್ದ ಸ್ಟೀಮ್ ಹಾಗೂ ಸೋನೆ ಮುಸುರಿ ರಾ ರೈಸ್ ಈ ವಾರ 50 ರಿಂದ 60 ರೂ. ಆಗಿದೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಆಸೆ ತೋರಿಸಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಟೊಮೇಟೊ ಬೆಲೆ ದಶಕ ದಾಟಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಹಾಗೇ ದಿನಸಿ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.