ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಸಂಸದೀಯ ಸ್ಥಾಯಿ ಸಮಿತಿ ಇಂದು ಸಭೆಯನ್ನು ಆಯೋಜಿಸಿದೆ. ಇದರಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ಭಾಗಿಯಾಗಲಿದ್ದಾರೆ ಜತೆಗೆ ಇಬ್ಬರು ಸಂಸದರು ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಏಕರೂಪ ನೀತಿ ಸಂಹಿತೆಯ ಮಸೂದೆಯನ್ನು ಸಂಸತ್ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಸಂಸದರ ಅಭಿಪ್ರಾಯವನ್ನು ತಿಳಿಯಲು ಸಂಸದೀಯ ಸ್ಥಾಯಿ ಸಮಿತಿ ಸಭೆ ಕರೆಯಲಾಗಿದೆ. ಬಿಜೆಪಿಯ ರಾಜ್ಯಸಭಾ ಸಂಸದ ಸುಶೀಲ್ ಮೋದಿ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಇಲಾಖೆ-ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ಸಭೆಯು ಜುಲೈ 3 ರಂದು ಸೋಮವಾರ ಮಧ್ಯಾಹ್ನ 3.00 ಗಂಟೆಗೆ ನಡೆಯಲಿದೆ.
ಏಕರೂಪ ನೀತಿ ಸಂಹಿತೆ ಎಂದರೇನು? ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು. ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ, ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ.
ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು.
ಬೇರೆ ರೀತಿಯಲ್ಲಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.