ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ

ಭುನವೇಶ್ವರ: ಕೆಲ ದಿನಗಳ ಹಿಂದೆಯಷ್ಟೇ ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತಕ್ಕೆ ಅಸಲಿ ಕಾರಣ ಏನೆಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸುಮಾರು 293 ಜೀವಗಳನ್ನು ಬಲಿಪಡೆದ ದುರಂತಕ್ಕೆ ಮಾನವ ದೋಷವೇ ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ದಳ (CBI) ಕ್ರಿಮಿನಲ್‌ ಅಪರಾಧ ಹಿನ್ನೆಲೆ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದೆ. ರೈಲ್ವೆ ಇಲಾಖೆ ಅಧಿಕಾರಿ ಮೂಲಗಳ ಪ್ರಕಾರ 3‌ ವರ್ಷಗಳ ಹಿಂದೆ ಸುರಕ್ಷತೆಯ ಕಾರಣದಿಂದ ರೈಲ್ವೆ ಅಳಿ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿತ್ತು. ಆ ನಂತರ ಅಧಿಕಾರಿಗಳು ಅಳಿ ತಪಾಸಣೆ ನಡೆಸಿ ಸುರಕ್ಷತಾ ಕಾರ್ಯವಿಧಾನ ಅನುಸರಿಸೋದನ್ನ ಕಡೆಗಣಿಸಿದ್ದರು. ಹಾಗಾಗಿ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣ್ತಿದೆ. ಸಿಗ್ನಲಿಂಗ್‌ ವಿಭಾಗದವರೂ ಮಾತ್ರವಲ್ಲದೇ ಸುರಕ್ಷತೆಯ ಪ್ರಕ್ರಿಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಸಚಿವಾಲಯ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

CSR ವರದಿಯಲ್ಲಿ ವಿಧ್ವಂಸಕ ಕೃತ್ಯ ಎಂದೇ ಸೂಚಿಸಿದ್ದರೂ, ಸಿಬಿಐನ ನಂತರದ ವರದಿಗಳಿಂದ ರೈಲ್ವೆ ಇಲಾಖೆ ತನ್ನ ಸುರಕ್ಷತಾ ವ್ಯವಸ್ಥೆಯನ್ನ ಮರುಹೊಂದಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಉನ್ನತಮಟ್ಟದ ಸುರಕ್ಷತಾ ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ. ಅದಕ್ಕಾಗಿ ಉಕ್ಕಿನ ಉದ್ಯಮದಲ್ಲಿ ಬಳಸಲಾಗುವ ಉತ್ತಮ ತಂತ್ರಜ್ಞಾನಗಳು ಮತ್ತು ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬಳಸುವ ರೈಲ್ವೆ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಎಲೆಕ್ಟ್ರಾನಿಕ್ ರಿಲೇ ಸಿಸ್ಟಮ್‌ಗಳ ಬಳಕೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬರಲು ಕನಿಷ್ಠ ಮೂರು ವರ್ಷಗಳ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜೂ.2 ರಂದು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿ ಕೆಲ ಬೋಗಿಗಳು ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಬಿದ್ದಿವೆ. ಸ್ವಲ್ಪ ಸಮಯದ ನಂತರ ಅದೇ ಹಳಿಯಲ್ಲಿ ಬಂದ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿತ್ತು ಈ ಘಟನೆಯಲ್ಲಿ 288 ಜನ ಸಾವಿಗೀಡಾಗಿದ್ದರು.