ಶಿರಸಿ(ಉತ್ತರ ಕನ್ನಡ): ಆನ್ಲೈನ್ ಗೇಮ್ ಅಂದ್ರೆ ಅದೇನ್ ಹುಚ್ಚು ಅಂತೀರಾ.. ಅದೇನ್ ಚಟ ಅಂತೀರಾ.. ಬಿಡಿಸಲಾಗದ ನಂಟು.. ಎಳೇಳು ಜನ್ಮದ ನಂಟು ಅನ್ನೋ ರೀತಿ ಯುವಕರಿಗೆ ಆನ್ಲೈನ್ ಗೇಮ್ ಚಟವಾಗಿಪರಿಣಮಿಸಿದೆ. ಲಕ್ಷ ಲಕ್ಷ ಸಾಲ ಮಾಡಿಯಾದ್ರೂ ಆಡುವುದಕ್ಕೆ ಹಿಂದೆ ಮುಂದೆ ನೋಡದೇ ಹೋದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆನ್ಲೈನ್ಗೇಮ್ ಚಟದಿಂದ 65 ಲಕ್ಷ ರೂ. ಹೆಚ್ಚು ಸಾಲ ಮಾಡಿಕೊಂಡು ತೀರಿಸಲಾಗದೇ ಆನ್ಲೈನ್ ಗೇಮ್ ಚಟನೂ ಬಿಡಲಾಗದೇ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಾಳೆತೋಟ ಗ್ರಾಮದಲ್ಲಿ ನಡೆದಿದೆ. 37 ವರ್ಷದ ಶಾಂತರಾಮ ಹೆಗಡೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಶಾಂತರಾಮ ಹೆಗಡೆ ಮದುವೆಯಾಗಿ ಕೇವಲ 2ವರ್ಷ ಅಷ್ಟೇ ಆಗಿತ್ತು. ಇದು ಬದುಕಿ ಬಾಳಬೇಕಾದ ಸಮಯದಲ್ಲಿ ಆನ್ಲೈನ್ ಗೇಮ್ನ ಚಟಕ್ಕೆ ಬಿದ್ದು ಜೀವವನ್ನೇ ಕಳೆದುಕೊಂಡಿದ್ದಾನೆ. ಈತ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತಿದ್ದ. ತಾಯಿ ಕಳೆದುಕೊಂಡು ಚಿಕ್ಕಮ್ಮನ ಆಸರೆಯಲ್ಲಿ ಬೆಳೆದಿದ್ದ ಈತ ಕಳೆದ ಎರಡು ವರ್ಷದ ಹಿಂದೆ ವಿವಾಹವಾಗಿದ್ದು, ಅದ್ಭುತ ಜೀವನ ಮಾಡುತ್ತಿದ್ದ,
ಆದ್ರೆ ಸಮಯ ಕಳೆಯಲು ಆನ್ ಲೈನ್ ಗೇಮ್ ಶುರುಮಾಡಿದ್ದಾತ ಲಕ್ಷ ಲಕ್ಷ ಹಣವನ್ನೇ ಸುರಿದಿದ್ದಾನೆ. ತಾನೂ ಮಾಡಿದ ಸಾಲವೇ 65 ಲಕ್ಷ ರೂ. ದಾಟಿ ಹೋಗಿತ್ತು. ಸಾಲಗಾರರ ಕಾಟ ತಾಳಲಾರದೇ ಮನೆಯಿಂದ ಹೊರಟವನು ಶಿರಸಿಯ ಕೊಳವೆ ಅರಣ್ಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ಸಹ ತಾನು ಆನ್ ಲೈನ್ ಗೇಮ್ ಗೀಳಿನಿಂದ ಹೊರಬರಲಾಗದೇ, ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ನೇಣಿಗೆ ಶರಣಾಗಿದ್ದಾನೆ.