ಅಲ್ಲಿ ಅನ್ನಭಾಗ್ಯ ಹಳಸಿದೆ; ಇಲ್ಲಿ ಬಂದು 4,000 ಪಿಂಚಣಿ ಕೊಡ್ತೀವಿ ಅಂತಿರಾ!? ರಾಹುಲ್ ಗಾಂಧಿ ಭರವಸೆ ಹಾಸ್ಯಾಸ್ಪದ ಎಂದು ಜರಿದ ಸಚಿವ ಕೆಟಿಆರ್​​

ತೆಲಂಗಾಣ: ಖಮ್ಮಂನಲ್ಲಿ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಅವರ 4,000 ರೂಪಾಯಿ ಪಿಂಚಣಿ ಭರವಸೆಯನ್ನು ಗುರಿಯಾಗಿಸಿಕೊಂಡು ತೆಲಂಗಾಣ ರಾಜ್ಯದ ಕೈಗಾರಿಕಾ ಸಚಿವ ಕೆಟಿ ರಾಮರಾವ್ (KT Rama Rao).‘ಅನ್ನ ಭಾಗ್ಯ’ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ಆಡಳಿತ ವಿರೋಧಿಗೆ ಪರ್ಯಾಯವಾಗಿ ಗೆದ್ದಿದೆಯೇ ಹೊರತು, ಕಾಂಗ್ರೆಸ್‌ನ ಅರ್ಹತೆಯಿಂದಲ್ಲ ಎಂದು ಕಟಕಿಯಾಡಿದ್ದಾರೆ. ಭಾನುವಾರ ಖಮ್ಮಮ್​​ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಆರ್‌ಎಸ್ ವಿರುದ್ಧ ಮಾಡಿದ ಟೀಕೆಗೆ ಸಚಿವ ಕೆಟಿ ರಾಮರಾವ್, ಟಿ ಹರೀಶ್ ರಾವ್ ಸೇರಿದಂತೆ ಬಿಆರ್‌ಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.

ತೆಲಂಗಾಣ ಕೈಗಾರಿಕಾ ಮತ್ತು ಐಟಿ ಸಚಿವ ಕೆಟಿ ರಾಮರಾವ್ ಅವರು ಬಿಜೆಪಿಯ ಸಂಬಂಧಿಕರ ಪಕ್ಷವಲ್ಲ ಎಂದು ಹೇಳಿದ್ದಾರೆ. “ನಿಮ್ಮದು ಭಾರತೀಯ ರಣಹದ್ದುಗಳ ಪಕ್ಷ. ಎಐಸಿಸಿ ಎಂದರೆ ಅಖಿಲ ಭಾರತ ಭ್ರಷ್ಟಾಚಾರ ಸಮಿತಿ. ಭ್ರಷ್ಟಾಚಾರ, ಅದಕ್ಷತೆಗೆ ಒಂದೇ ವಿಳಾಸವಿದೆ ಮತ್ತು ಅದು ಕಾಂಗ್ರೆಸ್” ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಹಗರಣಗಳಿಂದಾಗಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿದ ಇತಿಹಾಸವನ್ನು ಜನ ಮರೆತಿಲ್ಲ. ನಮ್ಮ ಪಕ್ಷ ಬಿಜೆಪಿಗೆ ಬಿ ಟೀಮ್ ಅಲ್ಲ, ಕಾಂಗ್ರೆಸ್ ಸಿ ಟೀಮ್ ಕೂಡ ಅಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ – ಎರಡನ್ನೂ ಎದುರಿಸಿ ಸೋಲಿಸಬಲ್ಲ ಪಕ್ಷ ನಮ್ಮದು. ಕರ್ನಾಟಕದಲ್ಲಿ ಈಗಾಗಲೇ ಅನ್ನಭಾಗ್ಯದ ಭರವಸೆಯನ್ನು ಮುರಿದಿರುವಿರಿ. ಗ್ಯಾರಂಟಿಗಳನ್ನು ಜಾರಿಗೆ ತರಲಾರದೆ ಪರದಾಡುತ್ತಿದ್ದೀರಿ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಬಂದು ಹೊಸದಾಗಿ ನಾಲ್ಕು ಸಾವಿರ ಪಿಂಚಣಿ ಭರವಸೆಯನ್ನು ನೀಡಿದ್ದೀರಿ! ನಿಮ್ಮನ್ನು ಯಾರು ನಂಬುತ್ತಾರೆ? ಪ್ರಣಾಳಿಕೆಯಲ್ಲಿ ನೀಡಿದ್ದ ಪಡಿತರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೆ ಈಗ ಏಕಾಏಕಿ ಘೋಷಣೆಗಳನ್ನು ಮಾಡಲು ಹೊರಟಿದ್ದೀರಿ. ಕರ್ನಾಟಕದಲ್ಲಿ ಕಾಂಗ್ರೆಸ್ ಅರ್ಹತೆಯಿಂದಾಗಿ ಗೆಲ್ಲಲಿಲ್ಲ. ಜನರು ಬಿಜೆಪಿಯನ್ನು ಹೊರಹಾಕಲು ಬಯಸಿದ್ದರಿಂದ ಇದು ಸಂಭವಿಸಿದೆ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟಿ ಹರೀಶ್ ರಾವ್ ಅವರು ಕಾಳೇಶ್ವರಂನಲ್ಲಿ 1 ಲಕ್ಷ ಕೋಟಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಕಾಳೇಶ್ವರಂಗೆ ಖರ್ಚು ಮಾಡಿದ ಹಣ 80 ಸಾವಿರ ಕೋಟಿ ರೂಪಾಯಿ. ಈ ಬಗ್ಗೆ ಕಾಂಗ್ರೆಸ್​​ ನಾಯಕ ರಾಹುಲ್​ ಅವರು ಸತ್ಯಾಂಶಗಳನ್ನು ಕೈಯಲ್ಲಿ ಹಿಡಿದು ಮಾತನಾಡಲೀ. ಅವರದು ಏನಿದ್ದರೂ ಬಿ-ತಂಡ ಮತ್ತು ಸಿ-ತಂಡದ ಪಾಲಿಟಿಕ್ಸ್​​. ನಮ್ಮ ನೀತಿಗಳು ಶೀ ತಂಡಗಳು ಮತ್ತು ರೈತಾಪಿ ತಂಡಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆ. ನಾವು ಬಡವರು, ದಲಿತರು ಮತ್ತು ದೀನದಲಿತರ ತಂಡದಲ್ಲಿದ್ದೇವೆ.

ಖಮ್ಮಮ್​​ ಸಭೆಯಲ್ಲಿ ಬಿಆರ್‌ಎಸ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಬಿಆರ್‌ಎಸ್‌, ಸಿಎಂ ಕೆಸಿಆರ್‌ ರಿಮೋಟ್‌ ಕಂಟ್ರೋಲ್‌ ಮೂಲಕ ಕಂಟ್ರೋಲ್‌ ಮಾಡುತ್ತಿದ್ದಾರೆ. ಬಿಆರ್‌ಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಬಣ್ಣಿಸಿದ್ದರು. ಬಿಜೆಪಿ ರಿಶ್ತೇದಾರ್ ಸಮಿತಿ ಎಂದೂ ಬಣ್ಣಿಸಿದ್ದರು. ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ 4,000 ರೂ ಪಿಂಚಣಿ ಮತ್ತು ಆದಿವಾಸಿಗಳಿಗೆ ಭೂಮಿ ನೀಡುವುದಾಗಿ ರಾಹುಲ್​​ ಭರವಸೆ ನೀಡಿದ್ದಾರೆ.