ಮೈಸೂರು: ಪ್ರೀತ್ಸೆ….ಪ್ರೀತ್ಸೆ ಎಂದು ಯುವಕನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲ್ಲೂಕು ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ. ಹರ್ಷಿತಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು ಎನ್ನುವ ಯುವಕ ತನ್ನ ಪ್ರೀತಿಸುವಂತೆ ಹರ್ಷಿತಾ ಹಿಂದೆ ಬಿದ್ದಿದ್ದ. ಆದ್ರೆ, ಶಿವು ಮಾಡಿದ್ದ ಲವ್ ಪ್ರಪೋಸ್ ಹರ್ಷಿತಾ ತಿರಸ್ಕರಿಸಿದ್ದಾಳೆ. ಆದರೂ ಪದೇ ಪದೇ ಪ್ರೀತಸುವಂತೆ ಪೀಡಿಸುತ್ತಿದ್ದ. ಇದರಿಂದ ಮನನೊಂದ ಹರ್ಷಿತಾ ಕೀಟನಾಶಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು. ಇದನ್ನು ತಿಳಿದ ಶಿವು ತನ್ನನ್ನು ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ. ಇದರಿಂದ ಬೇಸತ್ತ ಹರ್ಷಿತಾ ಕೀಟನಾಶಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಹರ್ಷಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾಳೆ. ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಆರೋಪ ಮಾಡಿದ್ದು, ಈ ಬಗ್ಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಘಟನೆ ನಡೆದ ಬಳಿಕ ಲವರ್ ಬಾಯ್ ಶಿವು ತಲೆ ಮರೆಸಿಕೊಂಡಿದ್ದಾನೆ.