ಅಂಕೋಲಾ: ಅಂಕೋಲಾ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 22, ವಂದಿಗೆಯಲ್ಲಿ ನಾಗೇಶ ಆಗೇರ ಇವರಿಗೆ ಸಂಬಂಧಿಸಿದ ಶೌಚಾಲಯದ ತೆರೆದ ಗುಂಡಿಯೊಳಗೆ ಹಸುವೊಂದು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದೆ. ನಾಲ್ಕು ದಿನಗಳ ಹಿಂದೆ ಹಸು ಗುಂಡಿಯೊಳಗೆ ಬಿದ್ದಿರಬಹುದು ಎನ್ನಲಾಗಿದೆ.
ಕೊಳೆತ ಸ್ಥಿತಿಯಲ್ಲಿದ್ದು ದುರ್ನಾತ ಬೀರುತ್ತಿರುವ ಕಾರಣ ಗುಂಡಿ ಒಳಗೆ ಹಸು ಬಿದ್ದು ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಸ್ಥಳೀಯರು ಪುರಸಭೆ ಸದಸ್ಯರಾದ ರೇಖಾ ದಿನಕರ ಗಾಂವಕರ್ ಅವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅವರು ಅಂಕೋಲಾ ಪುರಸಭೆಯ ಸಿಬ್ಬಂದಿ ಮತ್ತು ಪೌರಕಾರ್ಮಿಕರ ಗಮನಕ್ಕೆ ವಸ್ತುಸ್ಥಿತಿಯನ್ನು ವಿವರಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿರುವ ಹಸುವಿನ ಮೃತ ದೇಹವನ್ನು ಪುರಸಭೆಯ ಪೌರಕಾರ್ಮಿಕರು ಹರಸಾಹಸಪಟ್ಟು ಮೇಲೆತ್ತುವಂತಾಯಿತು. ಮಳೆಯ ನಡುವೆಯೂ ಇಂತಹ ಪರಿಶ್ರಮದಿಂದ ಕಾರ್ಯಾಚರಣೆ ಕೈಗೊಂಡ ಪೌರಕಾರ್ಮಿಕರಿಗೆ ಪುರಸಭೆ ಸದಸ್ಯೆ ರೇಖಾ ಗಾಂವಕರ ಮತ್ತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಜೆಸಿಬಿ ಸಹಾಯದಿಂದ ಹೊಂಡ ನಿರ್ಮಿಸಿ ಹಸುವಿನ ಅಂತ್ಯಸಂಸ್ಕಾರ ಮಾಡಲಾಯಿತು.
ಮನೆಯ ಮಾಲೀಕರ ಬೇಜವಾಬ್ದಾರಿತನದಿಂದ ಶೌಚಾಲಯದ ಟ್ಯಾಂಕ್ ನಲ್ಲಿ ಬಿದ್ದು ಹಸುವಿನ ಪ್ರಾಣವೇ ಹಾರಿ ಹೋಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಬಾರದು. ತಮ್ಮ ವಾರ್ಡಿನಲ್ಲಿರುವ ತೆರೆದ ಗುಂಡಿಗಳು ಮತ್ತು ಕೊಳವೆ ಬಾವಿಗಳ ಮಾಹಿತಿ ಕಲೆ ಹಾಕಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೇಖಾ ಗಾಂವಕರ ತಿಳಿಸಿ ಪೌರ ಕಾರ್ಮಿಕರ ಕಾರ್ಯವೈಖರಿಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.