ಸಿದ್ದಾಪುರ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಸೇರಿ ಪಕ್ಷಾತೀತವಾಗಿ ಕೆಲಸ ಮಾಡೋಣ ; ಭೀಮಣ್ಣ ನಾಯ್ಕ

ಸಿದ್ದಾಪುರ: ಸಿದ್ದಾಪುರ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಸೇರಿ ಪಕ್ಷಾತೀತವಾಗಿ ಕೆಲಸ ಮಾಡೋಣ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಪಟ್ಟಣ ಪಂಚಾಯತ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ. ಕ್ಷೇತ್ರದ ಶಾಸಕನಾಗಿ ಪಕ್ಷಾತೀತವಾಗಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಸಿದ್ದಾಪುರ ಪಟ್ಟಣದ ಅಭಿವೃದ್ಧಿಗೆ ಎಲ್ಲರು ಒಂದಾಗಿ ಕೆಲಸ ಮಾಡೋಣ. ಯಾವುದೇ ತಾರತಮ್ಯವಿಲ್ಲದೇ ಅನುದಾನ ಹಂಚಿಕೆ ಮಾಡಲಾಗುವುದು ಎಂದ ಅವರು, ಶರಾವತಿಯಿಂದ ಕುಡಿಯುವ ನೀರು ತರುವ ಯೋಜನೆಗೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರ ಜತೆಗೆ ಚರ್ಚಿಸಿ ಸಿದ್ದಾಪುರ ಪಟ್ಟಣದ ಬೆಳವಣಿಗೆ ದೃಷ್ಟಿಯಿಂದ ಕನಿಷ್ಠ 25 ಸಾವಿರ ಜನಕ್ಕೆ ಅನುಕೂಲವಾಗುವಂತೆ ಯೋಜನೆ ತಯಾರಿಸಿ ಎಂದು ಸೂಚಿಸಿದ್ದೇನೆ. ಸದ್ಯದಲ್ಲೆ ಪಟ್ಟಣ ಪಂಚಾಯತ ಸದಸ್ಯರೊಂದಿಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿಸಿ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

‘ ಮನವಿ ಸಲ್ಲಿಕೆ ‘
ಸಿದ್ದಾಪುರ ಪಟ್ಟಣದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಹಿರಿಯ ಸದಸ್ಯ
ಕೆ.ಜಿ.ನಾಯ್ಕ ಹಣಜಿಬೈಲ್ ನೇತ್ರತ್ವದಲ್ಲಿ ಶಾಸಕರಿಗೆ ನೀಡಲಾಯಿತು.

‘ ಶಾಸಕರಿಗೆ ಪೌರ ಸನ್ಮಾನ ‘
ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಪಟ್ಟಣ ಪಂಚಾಯತ ಕಚೇರಿಗೆ ಆಗಮಿಸಿದ ಭೀಮಣ್ಣ ನಾಯ್ಕ ಅವರಿಗೆ ಪಟ್ಟಣ ಪಂಚಾಯತ ವತಿಯಿಂದ ಪೌರಸನ್ಮಾನ ನೀಡಲಾಯಿತು.
ಈ ವೇಳೆ ಪಟ್ಟಣ ಪಂಚಾಯತ ಆಡಳಿತಾಧಿಕಾರಿ ಮಂಜುನಾಥ ಮುನ್ನೊಳ್ಳಿ, ಮುಖ್ಯಾಧಿಕಾರಿ ಐ.ಜಿ.ಕುನ್ನೂರ ಉಪಸ್ಥಿತರಿದ್ದರು.