ಅಂಕೋಲಾ: ನಾಮಂಕಿತ ಸಾಹಿತಿ ವಿಷ್ಣು ನಾಯ್ಕರಿಗೆ 80ರ ಸಂಭ್ರಮಮನೆಗೆ ತೆರಳಿ ಶುಭ ಕೋರಿದ ಗಣ್ಯರು ಮತ್ತು ಸಾಹಿತಿಗಳು.

ಅಂಕೋಲಾ: ವಿಷ್ಣು ನಾಯ್ಕರು ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಅಗ್ರಗಣ್ಯರು. ಸಾಹಿತ್ಯ ಕೃಷಿಯೊಂದಿಗೆ ರಾಘವೇಂದ್ರ ಪ್ರಕಾಶನದ ಮೂಲಕ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಹೊಸ ಲೇಖಕರಿಗೆ ಬರಹಗಾರರಿಗೆ ಕವಿಗಳಿಗೆ ಹುಮ್ಮಸ್ಸು ತುಂಬಿದ್ದಾರೆ. ಖ್ಯಾತ ಸಾಹಿತಿ ಗೌರೀಶ ಕಾಯ್ಕಿಣಿ ಅವರ ಹಲವು ಸಂಪುಟ ಕೃತಿಗಳನ್ನು ಪ್ರಕಟಿಸಿದ ಹೆಗ್ಗಳಿಕೆ ವಿಷ್ಣು ನಾಯ್ಕ ಅವರಿಗೆ ಸಲ್ಲುತ್ತದೆ ಎಂದು ಪಿಎಂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಾಹಿತಿ ಫಾಲ್ಗುಣ ಗೌಡ ತಿಳಿಸಿದರು.
ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕರ 80ನೇ ಜನ್ಮದಿನದ ಪ್ರಯುಕ್ತ ಕಾಲೇಜಿನ ಉಪನ್ಯಾಸಕರೊಂದಿಗೆ ವಿಷ್ಣು ನಾಯ್ಕ ಅವರ ಮನೆಗೆ ತೆರಳಿ ಶುಭಾಶಯ ಕೋರಿದ ನಂತರ ನುಡಿಸಿರಿಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಸಾಹಿತ್ಯ ರಂಗದಲ್ಲಿ ಹಲವು ದಶಕಗಳ ಅವಿರತ ಶ್ರಮದ ಸಂಕೇತ ವಿಷ್ಣು ನಾಯ್ಕ. ಸುತ್ತಮುತ್ತಲಿನ ಪರಿಸರದ ಅನುಭವಗಳೊಂದಿಗೆ ತಮ್ಮೊಳಗಿನ ಭಾವನೆಗಳಿಗೆ ಬರಹದ ರೂಪ ನೀಡಿ ಸಾಹಿತ್ಯ ಪ್ರೇಮಿಗಳ ರಸಾನುಭವ ಹೆಚ್ಚಿಸುವ ಕೃತಿಗಳನ್ನು ರಚಿಸಿದವರು. ಅವರು ರಾಘವೇಂದ್ರ ಪ್ರಕಾಶನದ ಮೂಲಕ ಹಲವು ಬರಹಗಾರರನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ಸರ್ಕಾರ ಸಾಹಿತ್ಯ, ಸಂಘಟನೆಗಳು ನಿರ್ವಹಿಸುವ ಕೆಲಸವನ್ನು ವ್ಯಕ್ತಿಯಾಗಿ ಸಾಧಿಸಿದ್ದಾರೆ ಎಂದರು.

ವಿಷ್ಣು ನಾಯ್ಕರ ಬಗೆಗೊಂದಿಷ್ಟು ಮಾಹಿತಿ.

ಅಂಕೋಲಾ ತಾಲೂಕಿನ ಸಾಂಸ್ಕೃತಿಕ ಪರಂಪರೆಯ ಅಂಬಾರಕೊಡ್ಲಾದಲ್ಲಿ 1944 ಜುಲೈ 1 ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಜನಪದ ಸಾಹಿತ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಊರಿಗೆ ಮೊದಲ ಪದವೀಧರರು ಎನ್ನುವ ಹೆಗ್ಗಳಿಕೆ ಇದೆ.
ದಿನಕರ ದೇಸಾಯಿ ಅವರ ಕೆನರಾ ವೆಲ್ಫೇರ್ ಟ್ರಸ್ಟಿನ ಅಡಿಯಲ್ಲಿ ಶಿಕ್ಷಕರಾಗಿ ಕಾಲೇಜು ಉಪನ್ಯಾಸಕರು ಮತ್ತು ಪ್ರಾಚಾರ್ಯರಾಗಿ 43 ವರ್ಷ ಸೇವೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿ ಹಂತದಲ್ಲಿಯೇ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಅವರು 50 ವರ್ಷಗಳ ಸಾಹಿತ್ಯ ಕೃಷಿಯಲ್ಲಿ ಸ್ವರಚಿತ 56 ಮತ್ತು ಸಂಪಾದಿತ 40 ಕೃತಿಗಳು ಸೇರಿದಂತೆ ಒಟ್ಟು 96ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

ನನ್ನ ಅಂಬಾರಕೊಡಲು, ಕಳಕೊಂಡ ಕವಿತೆ, ನೋವು ಪ್ರೀತಿಯ ಪ್ರಶ್ನೆ, ಬೆಳಕಿನ ಕರೆ, ಸಾರಾಯಿ ಸೂರಪ್ಪ, ಬೋಳುಗುಡ್ಡ, ಮರ್ಯಾದೆ, ಪ್ರಮಾಣ, ದುಡಿಯುವ ಕೈಗಳ ಹೋರಾಟದ ಕಥೆ, ಹಾಲಕ್ಕಿಗಳು; ಒಂದು ಅಧ್ಯಯನ ಸೇರಿದಂತೆ ಕವನ ಕಥೆ ಅಂಕಣ ಸಾಹಿತ್ಯ ನಾಟಕಗಳು ವ್ಯಕ್ತಿ ಪರಿಚಯ ಹೀಗೆ ಹಲವು ಆಯಾಮಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ವಿವಿಧ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಇವರು ಯಕ್ಷಗಾನ ಕಲಾವಿದರು ಹೌದು. ಅಮೃತ ಸಿಂಚನ ಎಂಬ ಧಾರಾವಾಹಿಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ, ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಸಮಿತಿಯ ಪದಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ ಒಳಗೊಂಡಂತೆ ಹತ್ತಾರು ಪ್ರಶಸ್ತಿಗಳು ಇವರ ಮೂಡಿಗೇರಿವೆ. ಸಾರಾಯಿ ವಿರೋಧಿ ಆಂದೋಲನ, ಹುಬ್ಬಳ್ಳಿ ಅಂಕೋಲಾ ರೈಲ್ವೆ ಬೇಡಿಕೆ, ಗೋಕಾಕ್ ಚಳುವಳಿ, ಸಂಪೂರ್ಣಕ್ರಾಂತಿ ಆಂದೋಲನ, ದಿನಕರ ದೇಸಾಯಿ ಅವರ ಸಮಾಜವಾದಿ ರೈತರ ಆಂದೋಲನಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಯ ಸಾಹಿತ್ಯ ರಂಗದಲ್ಲಿ ಹಿರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ವಿಷ್ಣು ನಾಯ್ಕ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಘಟಕ ಮತ್ತು ಸಾಹಿತಿಗಳು ಮನೆಗೆ ತೆರಳಿ ಅಭಿನಂದನೆಯನ್ನು ಸಲ್ಲಿಸಿದರು.

ಪಿಎಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ್ ಯುಕೆ, ರಮಾನಂದ ನಾಯಕ, ಉಲ್ಲಾಸ ಹುದ್ಧಾರ, ಕಸಾಪ ಗೌರವ ಕಾರ್ಯದರ್ಶಿ ಜಗದೀಶ ನಾಯಕ, ಕಸಾಪ ಗೌರವ ಕಾರ್ಯದರ್ಶಿ ಜಿ ಆರ್ ತಾಂಡೇಲ್, ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ, ಮಕ್ಕಳ ಕವಿ ನಾಗೇಂದ್ರ ನಾಯಕ, ಸಾಹಿತಿ ಜೆ.ಪ್ರೇಮಾನಂದ, ಶಿಕ್ಷಕ ರಫೀಕ್ ಶೇಕ್, ಚಿಂತಕ ಮಹಾಂತೇಶ ರೇವಡಿ, ಶ್ಯಾಮ ಸುಂದರ ಗೌಡ ಮತ್ತಿತರರು ಶುಭಾಶಯ ಕೋರಿದರು.