ಅಂಬೇವಾಡಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವಾಗ ಹೆಚ್ಚು ಕಡಿಮೆಯಾಗಿದೆ ಎಂದು ಯುವಕನಿಂದ ಸುಳ್ಳು ಆರೋಪ : ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಗೆ

ದಾಂಡೇಲಿ : ಪೆಟ್ರೋಲ್ ಬಂಕಿಗೆ ಬಂದು ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಹೋಗಿ ಮರಳಿ ಬಂದು ಪೆಟ್ರೋಲ್ ಹಾಕುವಾಗ ಹೆಚ್ಚು ಕಡಿಮೆಯಾಗಿದೆ ಎಂದು ಆರೋಪಿಸಿ, ಪೆಟ್ರೋಲ್ ಬಂಕ್ ನಲ್ಲಿ ತಗಾದೆ ತೆಗೆದಿದ್ದ ಯುವಕನೊಬ್ಬ ಕೊನೆಗೆ ಮಾಡಿರುವ ತಪ್ಪಿಗೆ ವಿಷಾಧ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಗೆ ಬರೆದ ಘಟನೆ ನಗರದ ಅಂಬೇವಾಡಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.

ನಗರದ ಪಟೇಲ್ ನಗರದ ನಿವಾಸಿ ಖಾದರ್ ಅಲಿ ಹಸನ್ ಸಾಬ್ ಎಂಬ ಯುವಕನು ತನ್ನ ಹೊಸದಾದ ದ್ವಿಚಕ್ರ ವಾಹನ ಹಿರೋ ಕ್ಸೂ ವಾಹನಕ್ಕೆ ಪೂರ್ತಿ ಟ್ಯಾಂಕ್ ಪೆಟ್ರೋಲ್ ತುಂಬಿಸಿದ್ದಾನೆ. ಸದ್ರಿ ವಾಹನಕ್ಕೆ 5.2 ಲೀ ಪೆಟ್ರೋಲ್ ಹಾಕಬಹುದಾದ ಸಾಮಾರ್ಥ್ಯವನ್ನು ಹೊಂದಿದೆ. ಆದರೆ ಇಲ್ಲಿ ಪೆಟ್ರೋಲ್ ಅದಕ್ಕಿಂತ ಹೆಚ್ಚು ಅಂದರೆ 6 ಲೀ ಗಿಂತಲೂ ಹೆಚ್ಚು ಪೆಟ್ರೋಲ್ ಹೇಗೆ ಹಾಕಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ, ಪೆಟ್ರೋಲ್ ಬಂಕ್ ಸಿಬ್ಬಂದಿಗಳಲ್ಲಿ ತಗಾದೆ ತೆಗೆದಿದ್ದಾನೆ. ಹೀಗೆ ಸಿಬ್ಬಂದಿಗಳು ಮತ್ತು ದ್ವಿಚಕ್ರ ವಾಹನದ ಯುವಕನ ಜೊತೆ ಚರ್ಚೆ ನಡೆಯುತ್ತಲೆ ಇತ್ತು. ಇತ್ತ ಪೆಟ್ರೋಲ್ ಬಂಕ್ ನಲ್ಲಿ ಜನರು ಜಮಾಯಿಸತೊಡಗಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ 112 ಪೊಲೀಸ್ ವಾಹನದಲ್ಲಿದ್ದ ಎಎಸೈ ವೆಂಕಟೇಶ್ ತೆಗ್ಗಿನ ಮತ್ತು ಪೊಲೀಸ್ ಸಿಬ್ಬಂದಿ ಚಿದಾನಂದ ಧರೀಗೌಡ ಅವರು ಯುವಕನಲ್ಲಿ ಚರ್ಚೆ ನಡೆಸಿದರು. ಆನಂತರ ದ್ವಿಚಕ್ರ ವಾಹನದ ಶೋರೂಂನವರನ್ನು ಕರೆಸಿ ನೋಡಿ, ದ್ವಿಚಕ್ರ ವಾಹನದಲ್ಲಿದ್ದ ಪೆಟ್ರೋಲನ್ನು ಪೂರ್ತಿಯಾಗಿ ತೆಗದು ಮರು ಪೆಟ್ರೋಲ್ ತುಂಬಿಸಿದಾಗ 6.44 ಲೀ ಪೆಟ್ರೋಲ್ ತುಂಬಿತ್ತು. 5.2 ಲೀ ಪೆಟ್ರೋಲ್ ತುಂಬಿಸಿಕೊಳ್ಳುವ ಸಾಮಾರ್ಥ್ಯವಿರುವ ವಾಹನಕ್ಕೆ 6.44 ಲೀ ಪೆಟ್ರೋಲ್ ತುಂಬಿಸಿಕೊಳ್ಳಲು ಸಾಧ್ಯವಾಗಿದ್ದರೂ, ವಾಹನದ ಹಿತದೃಷ್ಟಿಯಿಂದ ಕಂಪೆನಿಯವರು ಇಂತಿಷ್ಟೆ ಎಂದು ನಿಗಧಿಪಡಿಸಿರುತ್ತಾರೆ ಎಂದು ಯುವಕನಿಗೆ ಬುದ್ದಿ ಮಾತು ಹೇಳಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ನಗರ ಪೊಲೀಸ್ ಠಾಣೆಯಲ್ಲಿ ವಿಚರಣೆಗೊಳಪಡಿಸಿದ ಬಳಿಕ ಪೆಟ್ರೋಲ್ ಬಂಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸುಳ್ಳು ಆರೋಪ ಹೊರಿಸಿ, ಗೊಂದಲ ಸೃಷ್ಟಿಸಿದ ಹಿನ್ನಲೆಯಲ್ಲಿ ಮತ್ತು ಸಾರ್ವಜನಿಕರಿಗೆ ಪೆಟ್ರೋಲ್ ಬಂಕ್ ಬಗ್ಗೆ ತಪ್ಪು ಸಂದೇಶ ಹೋಗಬಾರದೆನ್ನುವ ನಿಟ್ಟಿನಲ್ಲಿ ಹಾಗೂ ಸುಮಾರು ಒಂದರಿಂದ ಎರಡು ಗಂಟೆಗಳವರೆಗೆ ಸಮಯ ಹರಣ ಮಾಡಿರುವುದಕ್ಕೆ ಎಚ್ಚರಿಕೆ ನೀಡಿ, ಬುದ್ದಿಮಾತು ಹೇಳಿ ಮಾಡಿದ ತಪ್ಪಿಗೆ ಯುವಕನ ಮೇಲೆ ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಪ್ಪೊಪ್ಪಿಗೆಯನ್ನು ಬರೆಸಿಕೊಂಡು, ಪೆಟ್ರೋಲ್ ಬಂಕ್ ಮಾಲಕರಾದ ಉಳವಪ್ಪ ಅವರ ಸಮ್ಮುಖದಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಯ್ತು.