ಗದಗ: ವಿಷಕಾರಿ ಹಾವು ಕಚ್ಚಿ ಆಸ್ಪತ್ರೆಯಲ್ಲಿ ಹೋರಾಟ; ಸಾವನ್ನಪ್ಪಿದ ಎನ್ನುವಾಗಲೇ ಬದುಕಿಸಿದ ಗರುಡರೇಖೆ!

ಗದಗ: ವಿಷಕಾರಿ ಹಾವೊಂದನ್ನು ಹಿಡಿದು ಅದರ ಜೊತೆಗೆ ಹುಚ್ಚಾಟ ಆಡಿದ ವ್ಯಕ್ತಿಯನ್ನು ರೋಷಗೊಂಡ ಆ ವಿಷಕಾರಿ ಹಾವು ಆ ವ್ಯಕ್ತಿಗೆ ನಾಲ್ಕು ಬಾರಿ ಕಚ್ಚಿದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಅಪರೂಪದ ಘಟನೆ ಜರುಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಸಿದ್ದಪ್ಪ ಎಂಬ ವ್ಯಕ್ತಿಯೇ ಹಾವು ಕಚ್ಚಿದರೂ ಬದುಕುಳಿದಿರುವ ವ್ಯಕ್ತಿ.

ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾದ ಸಂದರ್ಭದಲ್ಲಿ ಏರಿಯಾದಲ್ಲಿ ಈ ಹಾವು ಕಾಣಿಸಿಕೊಂಡಿದೆ. ತಕ್ಷಣವೇ ಸಿದ್ದಪ್ಪ ಬರಿಗೈಯಲ್ಲಿಯೇ ಹಾವು ಹಿಡಿದಿದ್ದಾನೆ. ಗ್ರಾಮಸ್ಥರು ಎಷ್ಟೇ ಹೇಳಿದರೂ ಕೇಳದ ಸಿದ್ದಪ್ಪ, ನನ್ನ ಕೈಮೇಲೆ ಗರುಡರೇಖೆ ಇದೆ,‌ ನನಗೇನೂ ಆಗಲ್ಲ ಎಂದು ಅದರೊಂದಿಗೆ ಆಟ ಆಡಿದ್ದಾನೆ.

ಇದರಿಂದಾಗಿ ಆಕ್ರೋಶಗೊಂಡ ಹಾವು ನಾಲ್ಕು ಬಾರಿ ಕಚ್ಚಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣವೇ ನರಗುಂದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಷ್ಟರಲ್ಲಿಯೇ ಹಿರೇಕೊಪ್ಪ ಗ್ರಾಮದಲ್ಲಿ ಹಾವು ಕಚ್ಚಿದ ಸಿದ್ದಪ್ಪ ಮೃತಪಟ್ಟಿದ್ದಾನೆ ಎಂದು ವದಂತಿ ಹಬ್ಬಿದೆ. ಅಷ್ಟರೊಳಗೆ ಆಸ್ಪತ್ರೆಯ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಪ್ಪ ಎದ್ದು ಕುಳಿತಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಸಿದ್ದಪ್ಪ ಸಾವಿನ ದವಡೆಯಿಂದ ಪಾರಾದ ಸುದ್ದಿ ಗ್ರಾಮದಲ್ಲಿ ಹಬ್ಬಿದ ನಂತರ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಅಂತೂ ಸಿದ್ದಪ್ಪ ನಂಬಿದ ಕೈ ಮೇಲಿನ ಗರುಡರೇಖೆ ಸಿದ್ದಪ್ಪನನ್ನು ಬದುಕಿಸಿದ್ದು ಒಂದು ಪವಾಡವೇ ಸರಿ ಎಂದು ಗ್ರಾಮಸ್ಥರು ನಂಬಿದ್ದಾರೆ.