ಹವಗಿಯಲ್ಲಿ ಉದ್ಯಮ ಶೀಲತಾ ಜಾಗೃತಿ ಶಿಬಿರ

ಹಳಿಯಾಳ : ತಾಲ್ಲೂಕಿನ ಹವಗಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಮತ್ತು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಉದ್ಯಮ ಶೀಲತಾ ಜಾಗೃತಿ ಶಿಬಿರವನ್ನು ಏರ್ಪಡಿಸಲಾಗಿತ್ತು.

ತರಬೇತಿ ಶಿಬಿರದಲ್ಲಿ ತರಬೇತಿದಾರರಾಗಿ ಭಾಗವಹಿಸಿ ಮಾತನಾಡಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ಕೌಶಲ್ಯದ ಕೊರತೆ. ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯಾಭಿವೃದ್ಧಿ ಅತೀ ಮುಖ್ಯವಾಗಿದೆ. ಬಹುಮುಖ್ಯವಾಗಿ ಯುವ ಜನತೆಯಲ್ಲಿ ಕೌಶಲ್ಯದ ಕೊರತೆಯಿರುವುದರಿಂದ ನಿರುದ್ಯೋಗ ಸಮಸ್ಯೆ ಜಟಿಲವಾಗತೊಡಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕೌಶಲ್ಯಾಭಿವೃದ್ಧಿಯ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಕೌಶಲ್ಯವನ್ನು ಕರಗತ ಮಾಡಿಕೊಂಡಾತ ಜೀವನದಲ್ಲಿ ಎಮದು ಸೋಲಲಾರ. ಪರಿಸ್ಥಿತಿಗೆ ತಕ್ಕಂತೆ ಬದುಕುವುದನ್ನು ಮತ್ತು ಸವಾಲನ್ನು ದಿಟ್ಟವಾಗಿ ಎದುರಿಸಲು ಕೌಶಲ್ಯ ಆತ್ಮಸ್ಥೈರ್ಯವನ್ನು ನೀಡುತ್ತದೆ. ಶಿಕ್ಷಣ ಪಡೆದ ನಂತರ ಉದ್ಯೋಗವನ್ನು ಹುಡುಕುವುದಕ್ಕಾಗಿ ಸಮಯ ಹರಣ ಮಾಡುವ ಬದಲು ಸ್ವ ಉದ್ಯೋಗ ಚಟುವಟಿಕೆಗಳನ್ನು ಕೈಗೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಉಪಯುಕ್ತ ಸ್ವ ಉದ್ಯೋಗ ತರಬೇತಿಗಳನ್ನು ನೀಡುತ್ತಿದ್ದು, ಇವುಗಳ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಸ್ಥರಾದ ಪ್ರಸಾದ್ ಕುಲಕರ್ಣಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿ, ಕಾಲೇಜಿನ ಉಪನ್ಯಾಸಕ ವೈ.ಐ.ಚೌವ್ಹಾಣ್ ಹಾಗೂ ಕಾಲೇಜಿನ ಬೋಧಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.