ಹಳಿಯಾಳ ತಾಲ್ಲೂಕಿನ ರಂಗನಾಥ್ ವಾಲ್ಮೀಕಿಗೆ ಶಿಕ್ಷಕ ರತ್ನ ಪ್ರಶಸ್ತಿಯ ಗರಿ

ಹಳಿಯಾಳ : ಹಳಿಯಾಳ ತಾಲ್ಲೂಕಿನ ನಿವಾಸಿ, ಬಹುಮುಖ ಪ್ರತಿಭೆ, ಸಾಹಿತಿ ಹಾಗೂ ಪ್ರತಿಭಾವಂತ ಶಿಕ್ಷಕರಾಗಿರುವ ರಂಗನಾಥ ವಾಲ್ಮೀಕಿಯವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಅಕ್ಷರ ತಾಯಿ ಲೂಸಿ ಸಾಲ್ಡಾನ್ ಸೇವಾ ಸಂಸ್ಥೆ ಧಾರವಾಡ ಇವರು ಕೊಡಮಾಡುವ 2023ನೇ ಸಾಲಿನ ಶಿಕ್ಷಕ ರತ್ನ ಪ್ರಶಸ್ತಿಗೆ ಭಾಜನರಾಗಿ, ಹಳಿಯಾಳ ತಾಲ್ಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಬಹುಮುಖ ಪ್ರತಿಭೆಯ ರಂಗನಾಥ್ ವಾಲ್ಮೀಕಿಯವರ ಅನೇಕ ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಐದು ಸಾಹಿತ್ಯ ಕೃತಿಗಳನ್ನು ನೀಡಿರುವ ಹೆಗ್ಗಳಿಕೆಯನ್ನು ಹೊಂದಿರುವ ರಂಗನಾಥ ವಾಲ್ಮೀಕಿಯವರು ಈಗಾಗಲೇ ಅಕ್ಷರ ಸಿರಿ, ರಾಜ್ಯಮಟ್ಟದ ಶತಶೃಂಗ, ಕರುನಾಡಿಗೆ ದಾರಿದೀಪ, ನಮ್ಮ ಗುರು, ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಪ್ರಶಸ್ತಿಗಳ ಜೊತೆ ಜೊತೆಗೆ ರಾಜ್ಯದ ವಿವಿದೆಡೆಗಳಲ್ಲಿ ಹತ್ತು ಹಲವು ಪುರಸ್ಕಾರದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಸಕ್ತ ಧಾರವಾಡ ಜಿಲ್ಲೆಯ ಮನಗುಂಡಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಂಗನಾಥ ವಾಲ್ಮೀಕಿಯವರಿಗೆ ಈ ಪ್ರಶಸ್ತಿ ಬಂದಿರುವುದಕ್ಕೆ ತಾಲ್ಲೂಕಿನ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.