ಅಂಕೋಲಾ: ವಿದ್ಯಾರ್ಥಿಗಳು ಓದಿನಲ್ಲಿ ಯಶಸ್ವಿಯಾಗಿಲ್ಲವೆಂದು ಎದೆಗುಂದಬಾರದು. ಓದಿಗಿಂತ ಜೀವನದಲ್ಲಿ ಯಶಸ್ಸು ಸಾಧಿಸುವುದು ಮುಖ್ಯ. ಸೂಕ್ತ ಸಿದ್ಧತೆ ಸತತ ಪರಿಶ್ರಮ ಇಲ್ಲದೇ ಸಾಧನೆ ಸಿದ್ದವಾಗುವುದಿಲ್ಲ ಎಂದು ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ ಹೇಳಿದರು.
ಅವರು ಪಟ್ಟಣದ ಸ್ವಾತಂತ್ಯ ಸಂಗ್ರಾಮ ಭವನದಲ್ಲಿ ಶುಕ್ರವಾರ ನಡೆದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘಗಳ ಉದ್ಘಾಟನೆ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಅರುಣಕುಮಾರ ಗಾಂವಕರ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಅರುಣಕುಮಾರ ಗಾಂವಕರ ಸ್ವಚ್ಚ ಮನಸ್ಸಿನ ಕ್ರಿಯಾಶೀಲ ವ್ಯಕ್ತಿ. ಸೃಜನಾತ್ಮಕ ಆಲೋಚನೆಗಳು ಹಾಗೂ ಉತ್ತಮ ಸಂಘಟನಾ ಚಾತುರ್ಯ ಅವರಿಗೆ ಇರುವ ವಿಶೇಷ ಗುಣ. ವೃತ್ತಿ ಜೀವನದಲ್ಲಿ ಯಾವುದೇ ಕಳಂಕ ಬಾರದಂತೆ ಸ್ವಯಂ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಅಧ್ಯಕ್ಷೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ರೇಖಾ ರಾವ್, ಕಾಲೇಜಿನ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಅರುಣಕುಮಾರ ಗಾಂವಕರ ನಮ್ಮ ಕಾಲೇಜಿನ ಆದರ್ಶ ಉಪನ್ಯಾಸಕರು. ನಿವೃತ್ತಿಯ ಅಂಚಿನಲ್ಲಿಯೂ, ತಮ್ಮ ರಜಾ ಅವಧಿಯಲ್ಲಿಯೂ ಕಾಲೇಜಿಗಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.
ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಅರುಣಕುಮಾರ ಗಾಂವಕರ ಮಾತನಾಡಿ, ಆತ್ಮ ಸಂತೃಪ್ತಿಯಿಂದ ನಿವೃತ್ತನಾಗುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ಸಂತಸ ತಂದಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮುಂದಾಳತ್ವದಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆ ಇದೆ. ಕಾಲೇಜಿನ ಫಲಿತಾಂಶ ಹೆಚ್ಚುತ್ತಿರಲಿ. ವಿದ್ಯಾರ್ಥಿಗಳು ಪೂರಕವಾಗಿ ವಿಧ್ಯಾಭ್ಯಾಸದಲ್ಲಿ ನಿರತರಾಗಿ ಎಂದರು.
ಹಿರಿಯ ಉಪನ್ಯಾಸಕ ಮಹೇಶ ನಾಯಕ ಪ್ರಾಸ್ತಾವಿಕ ಮಾತನಾಡಿ, ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಅರುಣಕುಮಾರ ಗಾಂವಕರ ವೃತ್ತಿ ಜೀವನದ ಮತ್ತು ಕಾಲೇಜಿನ ಬೆಳವಣಿಗೆ ಕುರಿತು ವಿವರಿಸಿದರು. ನಿವೃತ್ತ ಉಪನ್ಯಾಸಕರಾದ ಎಚ್ ಎಸ್ ಗೌಡ, ಎಸ್ ಆರ್ ನಾಯಕ, ರಾಜೀವ್ ನಾಯಕ ವೇದಿಕೆಯಲ್ಲಿದ್ದು ಮಾತನಾಡಿದರು. ಶ್ರೀಮತಿ ಸುಧಾ ಅರುಣಕುಮಾರ ಗಾಂವಕರ, ಸತ್ಯೇಂದ್ರ ನಾಯಕ ವೇದಿಕೆಯಲ್ಲಿದ್ದರು.
ಉಪನ್ಯಾಸಕರಾದ ಜಿ ಎಸ್ ಗೌಡ, ದೀಪಕ್ ನಾಯ್ಕ, ನಾರಾಯಣ ಗೌಡ, ಮಾರುತಿ ಹರಿಕಂತ್ರ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಪ್ರಮೋದ ಆಚಾರಿ ಅಭಿನಂದನಾ ಪತ್ರ ವಾಚಿಸಿದರು. ಉಪನ್ಯಾಸಕ ಗೋವಿಂದರಾಯ ನಾಯಕ ವಂದನಾರ್ಪಣೆ ಸಲ್ಲಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಸ್ವಾಗತಗೀತೆ ಪ್ರಸ್ತುತಪಡಿಸಿದರು. ಉಪನ್ಯಾಸಕಿ ಕವಿತಾ ಎಲ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ನಂದನ್, ಮೀರಾ, ಪೂರ್ಣ ಪ್ರಜ್ಞಾ ಕಾಲೇಜಿನ ಸಂಸ್ಥಾಪಕ ಜಗದೀಶ ನಾಯಕ, ಉಪನ್ಯಾಸಕರಾದ ವಸಂತ ಗೌಡ, ಕೃಷ್ಣ ಗೌಡ, ರೇಶ್ಮಾ ಗೌಡ, ಜ್ಞಾನೇಶ್ ನಾಯ್ಕ, ಗಂಗಾಧರ ನಾಯ್ಕ, ಶುಭಂ ಗಾಂವಕರ, ಹರ್ಷ ಶೆಟ್ಟಿ ಮತ್ತಿತರರು ಇದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಕಾಲೇಜಿಗೆ ಬರಮಾಡಿಕೊಳ್ಳಲಾಯಿತು