ಮಂಗಳೂರಿನ ಕೋಟೆಕಾರಿನಲ್ಲಿ ಒಂದೇ ದಿನ 245 ಮಿಮೀ ಮಳೆ, ಕರಾವಳಿ ಕರ್ನಾಟಕದಲ್ಲಿ ವರ್ಷಧಾರೆ ಸಾಧ್ಯತೆ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಮಂಗಳೂರಿನ  ಕೋಟೆಕಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ದಿನ ಗರಿಷ್ಠ 245 ಮಿಮೀ ಮಳೆಯಾಗಿದೆ. ಕರಾವಳಿಯ ಜಿಲ್ಲೆಗಳಾದ  ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಂಗಳವಾರ ರಾತ್ರಿಯಿಂದ ಮಳೆ ಸುರಿದಿದ್ದು, ಬುಧವಾರ ಬೆಳಗಿನ ಜಾವದವರೆಗೂ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 169 ಮಿಮೀ ಮಳೆಯಾಗಿದ್ದರೆ, ಉತ್ತರ ಕನ್ನಡದಲ್ಲಿ 122 ಮಿಮೀ ಮತ್ತು ಉಡುಪಿಯಲ್ಲಿ 123 ಮಿಮೀ ಗಿಂತ ಹೆಚ್ಚು ಮಳೆ ದಾಖಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಹತ್ತು ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಜೂನ್ 1-27 ರವರೆಗೆ ಕರಾವಳಿ ಪ್ರದೇಶಗಳಲ್ಲಿ 263 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ದತ್ತಾಂಶಗಳಿಂದ ತಿಳಿದುಬಂದಿದೆ. ಈ ಅವಧಿಯಲ್ಲಿ ಶೇ 67ರಷ್ಟು ಮಳೆ ಕೊರತೆಯಾಗಿದೆ ಎಂಬುದು ತಿಳಿದುಬಂದಿದೆ.

ಇಂದು (ಗುರುವಾರ) ಮತ್ತು ಶುಕ್ರವಾರ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಉತ್ತರ ಕನ್ನಡದ ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 181ಮಿಮೀ ಮಳೆಯಾಗಿದ್ದು, ಭಟ್ಕಳ ತಾಲೂಕಿನ ಮಾವಿನಕುರ್ವೆಯಲ್ಲಿ ಅತಿ ಕಡಿಮೆ ಅಂದರೆ 122 ಮಿಮೀ ಮಳೆಯಾಗಿದೆ. ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ, ಪಡುಬಿದ್ರಿಯಲ್ಲಿ 155 ಮಿಮೀ ಮಳೆಯಾಗಿದ್ದು, ಪಾಂಡೇಶ್ವರದಲ್ಲಿ ಕನಿಷ್ಠ 123 ಮಿಮೀ ಮಳೆಯಾಗಿದೆ.

ಕೆಎಸ್‌ಎನ್‌ಎಂಡಿಸಿ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮೂಡುಬಿದಿರೆ ಮತ್ತು ಕಡಬ ತಾಲೂಕುಗಳು, ಕುಂದಾಪುರ, ಉಡುಪಿ, ಬೈಂದೂರು, ಬ್ರಹ್ಮಾವರ, ಕಾಪು ಮತ್ತು ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಅಂಕೋಲಾ, ಭಟ್ಕಳ ತಾಲೂಕುಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.