ಚಂದ್ರಶೇಖರ್ ಆಜಾದ್​​​ನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ; ದಾಳಿಕೋರರನ್ನು ಬಂಧಿಸುವಂತೆ ಒತ್ತಾಯ

ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ  ಗುರುವಾರ ಆಜಾದ್ ಸಮಾಜ್ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪುನಿಯಾ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇಂದು ಸತ್ಯಕ್ಕಾಗಿ ಹೋರಾಡುವವರ ಮೇಲೆ ಮಾತ್ರ ದಾಳಿ ಮಾಡಲಾಗುತ್ತಿದೆ. ದಾಳಿಕೋರರನ್ನು ಆದಷ್ಟು ಬೇಗ ಬಂಧಿಸಬೇಕು ಎಂಬುದು ನಮ್ಮ ಏಕೈಕ ಬೇಡಿಕೆಯಾಗಿದೆ ಎಂದರು. ಚಂದ್ರಶೇಖರ್ ಯಾವುದೇ ಒಂದು ಸಮಾಜದ ನಾಯಕನಲ್ಲ, ಅವುರ ಇಡೀ ಸಮಾಜದ ನಾಯಕ. ಅದು ರೈತ ಚಳವಳಿಯಾಗಲಿ ಅಥವಾ ಕುಸ್ತಿಪಟುಗಳ ಹೋರಾಟವೇ ಆಗಿರಲಿ, ಅವರು ಸತ್ಯಕ್ಕಾಗಿ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನಿಂತಿದ್ದಾರೆ, ಚಂದ್ರಶೇಖರ್ ಅವರ ಪ್ರತಿಭಟನೆಗೆ ಸಂಪೂರ್ಣ ಬೆಂಬಲವಿದೆ ಎಂದು ಪುನಿಯಾ ಹೇಳಿದ್ದಾರೆ.

ಭೀಮ್ ಆರ್ಮಿ ಮುಖ್ಯಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದಾಗ, ನಾವು ಭೇಟಿಯಾಗಲು ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಚಂದ್ರಶೇಖರ್ ಮೇಲಿನ ಹಲ್ಲೆಯನ್ನು ಖಂಡಿಸಿದ ಸಾಕ್ಷಿ ಮಲಿಕ್, ಇದು ನಾಚಿಕೆಗೇಡಿನ ಸಂಗತಿ. ಪೊಲೀಸರು ಕೂಡಲೇ ದಾಳಿಕೋರರನ್ನು ಗುರುತಿಸಿ ಬಂಧಿಸಬೇಕು ಎಂದು ಹೇಳಿದ್ದಾರೆ..

ಇದಕ್ಕೂ ಮುನ್ನ ಉತ್ತರ ಪ್ರದೇಶ ಪೊಲೀಸರು ಕೊಲೆ ಯತ್ನ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಬುಧವಾರ ಸಂಜೆ ಸಹರಾನ್‌ಪುರ ಜಿಲ್ಲೆಯ ದಿಯೋಬಂದ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡು ಹಾರಿಸಿದ್ದು ಈ ದಾಳಿಯಲ್ಲಿ ಚಂದ್ರಶೇಖರ್ ಗಾಯಗೊಂಡಿದ್ದಾರೆ.

ಜಿಲ್ಲೆಯ ಸಹರಾನ್‌ಪುರದ ದಿಯೋಬಂದ್ ಪ್ರದೇಶದಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಅಜ್ಞಾತ ದುಷ್ಕರ್ಮಿಗಳು ಆಜಾದ್ ಮೇಲೆ ಗುಂಡು ಹಾರಿಸಿದಾಗ ಆಜಾದ್ ಸಮಾಜ ಪಕ್ಷದ ಸದಸ್ಯ ಮನೀಶ್ ವಾಹನ ಚಲಾಯಿಸುತ್ತಿದ್ದರು.

ಆಜಾದ್ ಅವರ ಸೊಂಟಕ್ಕೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ದೇವಬಂದ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ನಂತರ ಅವರನ್ನು ಸಹರಾನ್‌ಪುರದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಜಾದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಎಸ್‌ಯುವಿಯಲ್ಲಿ ಹಿಂತಿರುಗುತ್ತಿದ್ದಾಗ ದೇವಬಂದ್‌ನ ಗಾಂಧಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಕೋರರು ಕಾರಿನಲ್ಲಿದ್ದರು. ಅವರು ಬಲಭಾಗದಿಂದ ಬಂದು ಆಜಾದ್ ಅವರ ಎಸ್‌ಯುವಿ ಮೇಲೆ ಗುಂಡು ಹಾರಿಸಿದರು. ಗುಂಡು ಅವರ ಹೊಟ್ಟೆಯನ್ನು ತೂರಿಕೊಂಡಿದೆ ಎಂದು ಸಹರಾನ್‌ಪುರ (ನಗರ) ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ಹೇಳಿದ್ದಾರೆ.