ಅಂಕೋಲಾ: ತಾಲ್ಲೂಕಿನಲ್ಲಿ ಸಾಂಪ್ರದಾಯಿಕವಾಗಿ ಪೂಜಗೇರಿ ಹಳ್ಳದ ಕೋಡಿ ಕಡೆದು ಸಮದ್ರಕ್ಕೆ ಸೇರಿಸುವ ರೋಮಾಂಚಕ ಘಟನೆ ಬುಧವಾರ ಮಧ್ಯಾಹ್ನ ನದಿಭಾಗದ ಸಮುದ್ರ ತೀರದಲ್ಲಿ ನಡೆಯಿತು. ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಪೂಜಗೇರಿ ಹಳ್ಳದ ನೀರಿನ ಮಟ್ಟ ಹೆಚ್ಚಿದ ಪರಿಣಾಮ ಬೊಬ್ರುವಾಡದ ನದಿಭಾಗ ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಹಳ್ಳದ ಕೋಡಿ ಕಡೆದು ಸಂಪ್ರದಾಯ ಮುಂದುವರಿಸಿದರು.
ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಹಳ್ಳದ ನೀರು ಅರಬ್ಬಿ ಸಮುದ್ರ ಸೇರುವಂತೆ ಕೋಡಿ ಕಡಿಯುವ ಪದ್ಧತಿ, ತಾಲೂಕಿನ ವೈಶಿಷ್ಟಗಳಲ್ಲಿ ಒಂದಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸ್ಥಳೀಯ ಯುವಕರು ಈ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಡಿಸೆಂಬರ್ ತಿಂಗಳಿನಿಂದ ಸಮುದ್ರದ ಒಬ್ಬರದ ಸಮಯದಲ್ಲಿ ಜೋರಾದ ಅಲೆಗಳು ನದಿಭಾಗ ಸಮುದ್ರ ತೀರಕ್ಕೆ ಅಪ್ಪಳಿಸುತ್ತವೆ. ಅವಧಿಯಲ್ಲಿ ಹಳ್ಳದ ನೀರಿನ ಮಟ್ಟ ಹಾಗೂ ಅರಿವು ಕಡಿಮೆ ಇರುತ್ತದೆ. ಗಾಳಿಗೆ ಜೋರಾಗಿ ಬೀಸುವ ರಭಸದ ಅಲೆಗಳು ಮೇ ತಿಂಗಳ ಅಂತ್ಯದ ವೇಳೆಗೆ ಅಲ್ಲೊಂದು ಮರಳಿನ ದಿಬ್ಬವನ್ನೇ ಸೃಷ್ಟಿಸುತ್ತದೆ. ಹಳ್ಳ ಮತ್ತು ಸಮುದ್ರ ಬೇರ್ಪಟ್ಟು ಕೋಡಿ ನಿರ್ಮಾಣವಾಗುತ್ತದೆ.
ಮುಂಗಾರು ಆರಂಭಗೊಂಡಾಗ ಮಳೆಯ ಪರಿಣಾಮ ಹಳ್ಳದ ನೀರು ಏರಿಕೆಯಾಗುತ್ತದೆ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳ ಕೃಷಿ ಗದ್ದೆಗಳು ಜಲಾವೃತಗೊಳ್ಳುತ್ತವೆ. ಬೊಬ್ರುವಾಡದ ಬೊಬ್ರು ದೇವರ ಕೆರೆ ಭರ್ತಿಯಾಗಿ ಕೋಡಿ ಕಡಿಯಬೇಕಾದ ಎಚ್ಚರಿಕೆಯನ್ನು ಸೂಚ್ಯವಾಗಿ ನೀಡಿದಂತಾಗುತ್ತದೆ. ಇಲ್ಲವಾದಲ್ಲಿ ಮನೆಗಳಿಗೆ ನೀರನ್ನುಕುವ ಆತಂಕ ಸೃಷ್ಟಿಯಾಗುತ್ತದೆ.
ಬೊಬ್ರುದೇವರ ಕೆರೆ ತುಂಬಿದ ನಂತರ ನದಿಭಾಗದ ಗ್ರಾಮಸ್ಥರು ಮತ್ತು ಸುತ್ತಲಿನ ಜನರು ಕೋಡಿ ಕಡಿಯುವ ಕಾರ್ಯಕ್ಕೆ ಮುಂದಾಗುತ್ತಾರೆ. ಕೋಡಿ ಕಡಿದ ನಂತರ ಮೇಲಿಂದ ಹರಿದು ಬರುವ ಹಳ್ಳದ ನೀರು ಸರಾಗವಾಗಿ ಸಮುದ್ರವನ್ನು ಸೇರುತ್ತದೆ. ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತದೆ.
ಗ್ರಾಮದ ಹಿರಿಯರು, ಯುವಕರು, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಪಿಡಿಓ ಸೀತಾ ಮೇತ್ರಿ ಮತ್ತಿತರು ಇದ್ದರು.
ಗ್ರಾಮ ಪಂಚಾಯಿತಿ ಸದಸ್ಯರ ವಿರುದ್ಧ ಆಕ್ರೋಶ
ಕೋಡಿ ಕಡೆಯುವ ಸ್ಥಳಕ್ಕೆ ಆಗಮಿಸಿದ ಪಿಡಿಓ ಅವರೊಂದಿಗೆ ವಾಗ್ವಾದ ನಡೆಸಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಒಬ್ಬರು ಸ್ಥಳಕ್ಕೆ ಬಂದಿಲ್ಲ. ಜನರ ಸಮಸ್ಯೆ ಅವರಿಗೆ ತಿಳಿಯುವುದಿಲ್ಲವೇ? ಎಂದು ಅಸಮಾಧಾನ ಹೊರಹಾಕಿದರು.
ಕೋಡಿ ಕಡಿಯುವುದರಿಂದ ನಾಲ್ಕು ಗ್ರಾಮ ಪಂಚಾಯಿತಿಗಳ ನೂರಾರು ಕೃಷಿ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಅದಾಗಿಯೂ ಬೊಬ್ರುವಾಡ ಗ್ರಾಮ ಪಂಚಾಯಿತಿ ಹೊರತುಪಡಿಸಿ ಉಳಿದ ಯಾವುದೇ ಪಂಚಾಯಿತಿ ವ್ಯಾಪ್ತಿಯ ಜನರಾಗಲಿ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಈ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ. ಕೋಡಿ ಕಡಿಯುವ ಜನರಿಗೆ ಒಂದಿಷ್ಟು ಅನುಕೂಲವಾದರೂ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ದೀಪಾ ನಾಯ್ಕ ಅವರ ಪತಿ ಸೋಮಶೇಖರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಆಚಾರ – ನೂರು ವಿಚಾರ
ತಲತಲಾಂತರದಿಂದ ಕೋಡಿ ಕಡಿಯುವ ಸಂಪ್ರದಾಯ ಸುಗಮವಾಗಿ ನಡೆದುಕೊಂಡು ಬಂದಿದೆ. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಈ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬುಧವಾರ ಅಂತಿಮವಾಗಿ ಕೋಡಿ ತೆರವು ಮಾಡುವ ಸಂದರ್ಭದಲ್ಲಿ ಸಮುದ್ರ ಉಬ್ಬರದ ಪರಿಣಾಮ ಮರಳಿನ ರಾಶಿಯನ್ನು ಕಡಿಯುವುದು ಸ್ವಲ್ಪ ಕಷ್ಟಕರವಾಗಿ ಪರಿಣಮಿಸಿತು. ಹಿರಿಯರ ಮಾರ್ಗದರ್ಶನದ ಮೂಲಕ ಶ್ರಮವಹಿಸಿ ಕೋಡಿ ತೆರವು ಮಾಡಲಾಯಿತು.
ಇದೇ ಹಳ್ಳಕ್ಕೆ ಚುನಾವಣಾ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಕುರಿತಂತೆ ವಿರೋಧ ಮತ್ತು ಪರವಾದ ಅಭಿಪ್ರಾಯಗಳು ಕೇಳಿಬಂದಿದ್ದವು. ತಿಂಗಳ ಹಿಂದೆಯೇ ಚುನಾವಣೆ ನಡೆದಿದ್ದರಿಂದ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಒಂದಿಷ್ಟು ಜನರು ಕೋಡಿ ಕಡಿಯುವ ಕಾರ್ಯದಲ್ಲಿ ಭಾಗಿಯಾಗದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು.
ಸಾಂಪ್ರದಾಯಿಕ ಆಚರಣೆಗಳು ಒಗ್ಗಟ್ಟಿನ ಮಂತ್ರದಿಂದಲೇ ಸರಾಗವಾಗಿ ನಡೆದುಕೊಂಡು ಬಂದಿದ್ದು, ಅವುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗದೆ ಸಾಂಪ್ರದಾಯಿಕ ಬದ್ಧತೆಯಿಂದ ಸಾಗಬೇಕು. ಆಧುನಿಕ ಯುಗದಲ್ಲಿ ಸಾಮಾಜಿಕ ಕರ್ತವ್ಯದಿಂದ ವಿಮುಖರಾಗುವ ಹಲವರ ನಡುವೆ ಇಲ್ಲಿನ ಯುವಕರು ಉತ್ಸಾಹದಿಂದ ತೊಡಗಿಕೊಂಡಿದ್ದು ಕೋಡಿ ಕಡಿಯುವ ಪದ್ಧತಿ ಹೀಗೆ ಮುಂದುವರೆಯಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
ವರದಿ – ಮಾರುತಿ ಹರಿಕಂತ್ರ