ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದರು. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಜೊತೆ ಶಾಂತಿ ಮಾತುಕತೆ ಮಾಡಿಕೊಳ್ಳುವುದರ ಬದಲು ಯುದ್ಧ ಸಾರಿದ್ದರು. ಇದೀಗ ಉಕ್ರೇನ್ ಅಧ್ಯಕ್ಷ ಮತ್ತೆ ಅಮೆರಿಕ ಅಧ್ಯಕ್ಷರ ಮೊರೆ ಹೋಗಿದ್ದು, ದಯವಿಟ್ಟು ನಮ್ಮ ದೇಶಕ್ಕೆ ಬಂದು ಇಲ್ಲಿನ ಪರಿಸ್ಥಿತಿಯನ್ನೊಮ್ಮೆ ನೋಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಇದು ಜೈ ಬೈಡೆನ್ನ ಯುದ್ಧ, ನನ್ನದಲ್ಲ ಎಂದು ಹೇಳಿದ್ದಾರೆ.

ವಾಷಿಂಗ್ಟನ್, ಏಪ್ರಿಲ್ 15: ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ 150ಕ್ಕೂ ಹೆಚ್ಚು ಚೀನೀ ಪ್ರಜೆಗಳನ್ನು ನೇಮಿಸಿಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ . ಈ ಬಗ್ಗೆ ಚೀನಾಕ್ಕೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಉಕ್ರೇನಿಯನ್ ಪಡೆಗಳು ಪೂರ್ವ ಉಕ್ರೇನ್‌ನಲ್ಲಿ ಇಬ್ಬರು ಚೀನೀ ಹೋರಾಟಗಾರರನ್ನು ಸೆರೆಹಿಡಿದು, ಅವರ ವೀಡಿಯೊಗಳು ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ಪೋಸ್ಟ್ ಮಾಡಿದ ನಂತರ ಈ ಬಹಿರಂಗವಾಗಿದೆ. ಈ ಬಗ್ಗೆ “ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಗಮನ ಹರಿಸಬೇಕು” ಎಂದು ಝೆಲೆನ್ಸ್ಕಿ ಹೇಳಿದ್ದಾರೆ. “ಉಕ್ರೇನ್ ಪ್ರದೇಶದಲ್ಲಿ ಉಕ್ರೇನಿಯನ್ನರ ವಿರುದ್ಧ ಹೋರಾಡುತ್ತಿರುವ 155 ಚೀನೀ ನಾಗರಿಕರಿದ್ದಾರೆ.” ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಚೀನಾ ಇದುವರೆಗೂ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಧಿಕೃತವಾಗಿ ಎಲ್ಲೂ ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ, ಚೀನಾ ಪ್ರಜೆಗಳು ರಷ್ಯಾದ ಸೇನೆಯಲ್ಲಿ ಇರುವುದು ಬಹಳ ಮುಖ್ಯ ಬೆಳವಣಿಗೆಯಾಗಿದೆ. ಆದರೆ, ಚೀನಾ ಉಕ್ರೇನ್ ಅಧ್ಯಕ್ಷರ ಆರೋಪವನ್ನು ತಳ್ಳಿಹಾಕಿದೆ. ಹಾಗೇ, ಚೀನಾವನ್ನು ಯುದ್ಧಕ್ಕೆ ಎಳೆಯಲಾಗುತ್ತಿದೆ ಎಂಬ ಆರೋಪವನ್ನು ರಷ್ಯಾ ಕೂಡ ತಿರಸ್ಕರಿಸಿತು.
ಇದರ ನಡುವೆ ರಷ್ಯಾ-ಉಕ್ರೇನ್ ಯುದ್ಧವನ್ನು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಯುದ್ಧ ಎಂದು ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ. ಸಿಬಿಎಸ್‌ನ 60 ನಿಮಿಷಗಳ ಸಂದರ್ಶನದಲ್ಲಿ ಝೆಲೆನ್ಸ್ಕಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಉಕ್ರೇನ್‌ಗೆ ಭೇಟಿ ನೀಡುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಹೇಳಿಕೆ ನೀಡಿದ್ದಾರೆ.
“ದಯವಿಟ್ಟು, ಯಾವುದೇ ರೀತಿಯ ನಿರ್ಧಾರಗಳು, ಯಾವುದೇ ರೀತಿಯ ಮಾತುಕತೆಗಳ ಮೊದಲು ನಮ್ಮ ದೇಶದ ಜನರು, ಯೋಧರು, ಆಸ್ಪತ್ರೆಗಳು, ಚರ್ಚುಗಳು, ಸತ್ತ ಮಕ್ಕಳನ್ನು ನೋಡಲು ಬನ್ನಿ. ಇಲ್ಲಿನ ಪರಿಸ್ಥಿತಿ ಬಹಳ ಭೀಕರವಾಗಿದೆ ಯುದ್ಧದ ಭಯಾನಕತೆಗೆ ಉಕ್ರೇನ್ ನಲುಗಿದೆ” ಎಂದು ಝೆಲೆನ್ಸ್ಕಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಬೈಡೆನ್ ಅವರ ಯುದ್ಧವೇ ವಿನಃ ನನ್ನದಲ್ಲ. ನಾನು ಇದೀಗ ಇಲ್ಲಿಗೆ ಬಂದಿದ್ದೇನೆ. ಹಿಂದಿನ ಅವಧಿಯಲ್ಲಿ 4 ವರ್ಷಗಳ ಕಾಲ ಯುದ್ಧ ಸಂಭವಿಸದಂತೆ ತಡೆಯುವಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಧ್ಯಕ್ಷ ಪುಟಿನ್ ಮತ್ತು ಉಳಿದವರೆಲ್ಲರೂ ಬೈಡೆನ್ ಅವರನ್ನು ಗೌರವಿಸುತ್ತಿದ್ದರು!” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ
“ಈ ಯುದ್ಧದೊಂದಿಗೆ ನನಗೆ ಯಾವುದೇ ಸಂಬಂಧವಿರಲಿಲ್ಲ. ಆದರೆ ಸಾವು ಮತ್ತು ವಿನಾಶವನ್ನು ನಿಲ್ಲಿಸಲು ನಾನು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. 2020ರ ಅಧ್ಯಕ್ಷೀಯ ಚುನಾವಣೆಯು ಅಕ್ರಮವಾಗಿಲ್ಲದಿದ್ದರೆ ಆ ಭಯಾನಕ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಜೋ ಬೈಡನ್ ಇಬ್ಬರಿಗೂ ಈ ಯುದ್ಧವನ್ನು ಪ್ರಾರಂಭವಾಗದಂತೆ ತಡೆಯಲು ಹಲವು ಮಾರ್ಗಗಳಿದ್ದವು. ಅದೆಲ್ಲ ಮುಗಿದ ಕತೆ. ಈಗ ನಾವು ಅದನ್ನು ನಿಲ್ಲಿಸಬೇಕು. ಈ ಯುದ್ಧ ತುಂಬಾ ದುಃಖಕರ ಸಂಗತಿ!” ಎಂದು ಟ್ರಂಪ್ ಹೇಳಿದ್ದಾರೆ.