ದಾಂಡೇಲಿ : ಹೋಟೆಲ್ಗಳಲ್ಲಿ ತಿಂದುಂಡು ಉಳಿದ ಅನ್ನ ಇನ್ನಿತರ ಆಹಾರ ವಸ್ತುಗಳ ತ್ಯಾಜ್ಯವನ್ನು ದಯಮಾಡಿ ಗಟಾರಕ್ಕೆ ಚೆಲ್ಲದಿರಿ ಎಂದು ನಗರದ ಕೆ.ಸಿ.ವೃತ್ತದ ಹತ್ತಿರ ನಗರ ಸಭೆಯ ಪೌರಕಾರ್ಮಿಕರು ಮನವಿ ಮಾಡಿದ್ದಾರೆ.
ನಗರದ ಕೆ.ಸಿ.ವೃತ್ತದ ಹತ್ತಿರ ಇರುವ ಗಟಾರವೊಂದು ತ್ಯಾಜ್ಯದಿಂದ ತುಳಿ ತುಳುಕಿ ಜಾಮ್ ಆಗಿತ್ತು. ಪರಿಣಾಮವಾಗಿ ಸ್ಥಳೀಯ ಸುತ್ತಮುತ್ತಲು ಗಬ್ಬು ನಾರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ಹೋಟೆಲೊಂದರಿಂದ ತ್ಯಾಜ್ಯ ವಸ್ತುಗಳನ್ನು ಗಟಾರಕ್ಕೆ ಹಾಕಿದ ಪರಿಣಾಮವಾಗಿ ಗಟಾರ ಬ್ಲಾಕ್ ಆಗಿ ಅಸ್ವಚ್ಚತೆಯ ವಾತವರಣ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರ ಸೂಚನೆಯಂತೆ ಇಂದು ಪೌರಕಾರ್ಮಿಕರ ತಂಡ ಗಟಾರವನ್ನು ಸಂಪೂರ್ಣ ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ಗಟಾರದಲ್ಲಿ ಗಟ್ಟಿ ಕಲ್ಲಿನಂತಿದ್ದ ರಾಶಿ ರಾಶಿ ಅನ್ನ ಇನ್ನಿತರ ಆಹಾರ ವಸ್ತುಗಳು ಸ್ವಚ್ಚತೆಯ ಸಮಯದಲ್ಲಿ ಪತ್ತೆಯಾಗಿದ್ದು, ಇನ್ನಾದರೂ ಹೋಟೆಲ್ ನವರು ದಯಮಾಡಿ ತ್ಯಾಜ್ಯ ವಸ್ತುಗಳನ್ನು ಗಟಾರಕ್ಕೆ ಚೆಲ್ಲದೇ ಕಸ ಸಂಗ್ರಹಕಾರರಿಗೆ ನೀಡಿ, ಸ್ವಚ್ಚತೆಗೆ ಆಧ್ಯತೆ ನೀಡಬೇಕು ಮತ್ತು ಪೌರಕಾರ್ಮಿಕರ ಬೆವರ ಹನಿಗೆ ಆ ಮೂಲಕವಾದರೂ ಸಹಕರಿಸಿ ಎಂದು ಪೌರಕಾರ್ಮಿಕರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.