ಕಾಲಿವುಡ್​ ಸ್ಟಾರ್​ ಕಾಮಿಡಿಯನ್​ ಯೋಗಿ ಬಾಬು ಸಿನಿಮಾಗೆ ಸಾಧು ಕೋಕಿಲ ಪುತ್ರನ ನಿರ್ದೇಶನ

ಖ್ಯಾತ ನಟ ಸಾಧು ಕೋಕಿಲ  ಅವರದ್ದು ಕಲಾವಿದರ ಕುಟುಂಬ. ನಟನೆ, ನಿರ್ದೇಶನ ಮತ್ತು ಸಂಗೀತದಲ್ಲಿ ಅವರಿಗೆ ಹಿಡಿತ ಇದೆ. ಈಗ ಸಾಧು ಕೋಕಿಲ ಅವರ ಪುತ್ರ ಸುರಾಗ್​ ಕೂಡ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ವಿಶೇಷ ಏನೆಂದರೆ, ತಮಿಳಿನ ಖ್ಯಾತ ನಟ ಯೋಗಿ ಬಾಬು  ಅವರ ಜೊತೆ ಸುರಾಗ್​ ಸಿನಿಮಾ ಮಾಡುತ್ತಿದ್ದಾರೆ. ಕಾಲಿವುಡ್​ವುಡ್​ನಲ್ಲಿ ಸ್ಟಾರ್​ ಕಾಮಿಡಿಯನ್ ​ ಆಗಿ ಗುರುತಿಸಿಕೊಂಡವರು ಯೋಗಿ ಬಾಬು. ಅಂಥ ಅನುಭವಿ ಕಲಾವಿದನಿಗೆ ನಿರ್ದೇಶನ ಮಾಡುವ ಅವಕಾಶ ಸುರಾಗ್​ಗೆ ಸಿಕ್ಕಿದೆ. ತಮಿಳಿನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ಬಗ್ಗೆ ‘ಸಿನಿಮಾ ಎಕ್ಸ್​ಪ್ರೆಸ್​’ ವರದಿ ಪ್ರಕಟ ಮಾಡಿದೆ.

ಯೋಗಿ ಬಾಬು ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ ಅವರನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ಸುರಾಗ್​ ಜೊತೆ ಯೋಗಿ ಬಾಬು ಕೈ ಜೋಡಿಸಿರುವುದು ವಿಶೇಷ. ಈ ಸಿನಿಮಾ ಮಾಡಬೇಕು ಎಂದು ಬಹಳ ಸಮಯದಿಂದ ಸುರಾಗ್​ ಪ್ರಯತ್ನಿಸುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಯೋಗಿ ಬಾಬು ಮಾತ್ರವಲ್ಲದೇ ದಕ್ಷಿಣ ಭಾರತದ ಇನ್ನೂ ಇಬ್ಬರು ಸ್ಟಾರ್​ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

ಸುರಾಗ್​ ಮತ್ತು ಯೋಗಿ ಬಾಬು ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 2ನೇ ಹಂತದ ಶೂಟಿಂಗ್​ ಶೀಘ್ರದಲ್ಲೇ ಆರಂಭ ಆಗಲಿದೆ. ಸಾಧು ಕೋಕಿಲ ಅವರ ‘ಲೂಪ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಾಧು ಕೋಕಿಲ ಅವರೇ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಸುರಾಗ್​ ಗುರುತಿಸಿಕೊಂಡಿದ್ದಾರೆ. ಅಲ್ಲದೇ ‘ಉಪ್ಪಿ 2’ ಸಿನಿಮಾಗೆ ಸಹ-ನಿರ್ದೇಶಕನಾಗಿ ಅವರು ಕೆಲಸ ಮಾಡಿ ಅನುಭವ ಹೊಂದಿದ್ದರು. ಈಗ ಯೋಗಿ ಬಾಬು ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಕೌತುಕ ಮೂಡಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ತಮಿಳಿನ ಜೊತೆಗೆ ಬೇರೆ ಭಾಷೆಗಳಿಗೂ ಈ ಚಿತ್ರ ಡಬ್​ ಆಗಲಿದೆ. ಕನ್ನಡದ ಕಲಾವಿದರಾದ ಉಮಾಶ್ರೀ, ಅವಿನಾಶ್​ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.