ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

ನವದೆಹಲಿ: ಮುಂದಿನ 4-5 ದಿನಗಳ ವರೆಗೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕೆಲ ಭಾಗಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗೋವಾ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯುಂಟಾಗುವ ಸಾಧ್ಯತೆ ಇದೆ. ಮುಂದಿನ 5 ದಿನಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದೇಶಾದ್ಯಂತ ಮುಂಗಾರು ಪ್ರಭಾವ ಹೆಚ್ಚಿರಲಿದ್ದು, ಮಹಾರಾಷ್ಟ್ರದ ಹಲವು ನಗರಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಥಾಣೆ, ರಾಯಗಢ, ರತ್ನಗಿರಿ, ನಾಸಿಕ್, ಪುಣೆ, ಸತಾರಾ ಸೇರಿದಂತೆ ಹಲವೆಡೆ ಭಾರೀ ಮಳೆ ಇರಲಿದ್ದು, ಆರೆಂಟ್ ಅಲರ್ಟ್ ಘೋಷಿಸಲಾಗಿದೆ. 

ಈಗಾಗಲೇ ವಾಯುವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಮಾನ್ಸೂನ್ ಬಹುತೇಕ ಇಡೀ ದೇಶದ ಮೇಲೆ ಪರಿಣಾಮ ಬೀರಿದೆ. ಇಡೀ ಗುಜರಾತ್ ಹಾಗೂ ಆಗ್ನೇಯ ರಾಜಸ್ಥಾನವನ್ನು ಮಾನ್ಸೂನ್ ಆವರಿಸಿದೆ. ಮುಂದಿನ 2 ದಿನಗಳಲ್ಲಿ ದಕ್ಷಿಣ ಪಂಜಾಬ್ ಹರಿಯಾಣ ಹಾಗೂ ರಾಜಸ್ಥಾನದ ಉಳಿದ ಭಾಗಗಳಲ್ಲಿ ಆವರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.