ಕೋಟ್ಯಾಧಿಪತಿಯಾಗಲು ಡಾಬಾದಲ್ಲಿ ಪರಿಚಯನಾಗಿದ್ದ ಗೆಳೆಯನನ್ನು ಅದೇ ಡಾಬಾದ ಮುಂದೆ ಹತ್ಯೆಗೈದ

ಹಾವೇರಿ: ಮಹಾರಾಷ್ಟ್ರ ರಾಜ್ಯದ ಸೋಲ್ಲಾಪುರ ಜಿಲ್ಲೆಯ ಹನುಮಂತಗಾವ್ ಎಂಬ ಗ್ರಾಮದ ಗೋವಿಂದ ಎಂಬುವವನು ಕಳೆದ ನಾಲ್ಕು ತಿಂಗಳಿನಿಂದ ಕ್ಯಾಂಟರ್ ಮೂಲಕ ಉತ್ತಮ ಗುಣ ಮುಟ್ಟದ ಕಬ್ಬಿಣದ ವಸ್ತುಗಳನ್ನು ಸಾಗಾಣೆ ಮಾಡುತ್ತಿದ್ದ. ಮಹಾರಾಷ್ಟ್ರದ ಮೀರಜ್ ನಗರದಲ್ಲಿನ ಮಹೇಶ್ ಭೊಸಲೆ ಓಡೆತನದ ಲಾಜಿಸ್ಟಿಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇತನಿಗೆ ಒಳ್ಳೆಯ ಸಂಬಳ ಕೂಡ ಬರುತ್ತಿತ್ತು. ಕಾಯಕವೇ ಕೈಲಾಸವೆಂದು ನಂಬಿದ್ದ ಗೋವಿಂದ, ಹಗಲು ರಾತ್ರಿ ಎನ್ನದೆ ಒಬ್ಬನೆ ಮಹಾರಾಷ್ಟ್ರದಿಂದ ಕರ್ನಾಟಕ ಹಾಗೂ ತಮಿಳುನಾಡಿಗೆ ವಸ್ತುಗಳನ್ನು ಸಾಗಾಣೆ ಮಾಡುತ್ತಿದ್ದ. ಈ ವೇಳೆ ಧಾಬಾದಲ್ಲಿ ಪರಿಚಯವಾದ ಹನುಮಂತ ಎಂಬ ಸ್ನೇಹಿತನೇ ಇಂದು ಆತನನ್ನ  ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ನಾಲ್ಕು ತಿಂಗಳ ಹಿಂದೆ ಗೋವಿಂದ ಮಹಾರಾಷ್ಟ್ರದಿಂದ ಲೋಡ್ ತೆಗೆದುಕೊಂಡು ಬರುವಾಗ, ಹಾವೇರಿ ನಗರದ ಹೊರಭಾಗದಲ್ಲಿರುವ ಧಾಬಾವೊಂದರಲ್ಲಿ ಊಟ ಮಾಡಲು ಇಳಿಯುತ್ತಾನೆ. ಆಗ ಹನುಮಂತ ಎಂಬ ವ್ಯಕ್ತಿ ಪರಿಚಯ ಆಗುತ್ತಾನೆ. ಇದಾದ ಮೇಲೆ ಹನುಮಂತ, ಗೋವಿಂದನಿಗೆ ಆಗಾಗ ಭೇಟಿ ಆಗುತ್ತಿದ್ದ. ಪ್ರತಿ ಸಲ ಹಾವೇರಿ ಟೀ ಅಂಗಡಿಗೆ ಬಂದಾಗ ಹನುಮಂತನನ್ನು ಭೇಟಿ ಆಗುತ್ತಿದ್ದ ಗೋವಿಂದ. ಹನುಮಂತನ ಗೆಳೆತನ ನಂಬಿ ತಾನೂ ಸಾಗಾಣೆ ಮಾಡುವ ಕೊಟ್ಯಾಂತರ ರೂಪಾಯಿ ಮೌಲ್ಯದ ಕಬ್ಬಿಣದ ಬಗ್ಗೆ ಹೇಳುತ್ತಿದ್ದ. ಹೌದು ಗೊವಿಂದ ಸಾಗಿಸುವ ಕಬ್ಬಿಣ ಅತ್ಯಂತ ದುಬಾರಿ ಬೆಲೆಯ ಕಬ್ಬಿಣ ಆಗಿತ್ತು. ಆ ಕಬ್ಬಿಣವನ್ನು ಪೆಟ್ರೋಲ್ ಹಾಗೂ ಡಿಸೈಲ್ ಪೈಪ್ ಲೈನ್​ಗೆ ಬಳಸಲಾಗುತ್ತಿತ್ತು. ಹನುಮಂತನ ಗೆಳೆತನ ನಂಬಿದ್ದ ಗೋವಿಂದ ಗೆಳೆಯನಿಗೂ ತನ್ನ ಜೊತೆ ಬಾ ಎಂದು ಕರೆದು, ನೀನು ಬಾ ನಿನಗೂ ಡ್ರೈವಿಂಗ್ ಹೇಳಿ ಕೊಡುತ್ತೇನೆ, ಸ್ವಲ್ಪ ದಿನ ನನ್ನ ಜೊತೆ ಕ್ಲಿನರ್ ಆಗಿ ಕೆಲಸ ಮಾಡುವಂತೆ ಹೇಳುತ್ತಾನೆ.

ಹನುಮಂತ ಕೂಡ ಗೋವಿಂದನ ತರ ಕಬ್ಬಿಣ ವಸ್ತುಗಳನ್ನು ಸಾಗಾಣೆ ಮಾಡಿದ್ರೆ, ಏನು ಆಗುತ್ತಿರಲಿಲ್ಲ. ಆದ್ರೆ, ತಾನೂ ಬೇಗ ಶ್ರೀಮಂತ ಆಗಬೇಕೆಂಬ ದುರಾಸೆಯಿಂದ ಗೋವಿಂದ ಸಾಗಾಣೆ ಮಾಡುವ ಕಬ್ಬಿಣದ ವಸ್ತುಗಳನ್ನು ಲೂಟಿ ಮಾಡಲು ಸ್ಕೆಚ್ ಹಾಕಿದ್ದ. ಜೂನ್ 13 ರಂದು ಕೊಟ್ಯಾಂತರ ರೂಪಾಯಿ ಮೌಲ್ಯದ ಕಬ್ಬಿಣದ ವಾಲ್​ಗಳನ್ನು ಕ್ಯಾಂಟರ್ ಮೂಲಕ ಮೀರಜ್​ದಿಂದ ಚೆನೈಗೆ ಸಾಗಾಣೆ ಮಾಡುವಾಗ ಹನುಮಂತ ಕೂಡ ಗೊವಿಂದನ ಜೊತೆ ಕ್ಲಿನರ್ ಆಗಿ ಕ್ಯಾಂಟರ್ ಹತ್ತುತ್ತಾನೆ. ಈ ಸಂದರ್ಭದಲ್ಲಿ ವಾಹನದಲ್ಲಿ ಇಂದು ಅತಿ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಹಾಕಲಾಗಿದೆ ಎಂದು ಹೇಳುತ್ತಾನೆ. ಯಾಕಂದ್ರೆ, ಅಂದು ಅವರು ಸಾಗಾಣೆ ಮಾಡುತ್ತಿರುವ ಕಬ್ಬಿಣದ ಮೌಲ್ಯ ಬರೊಬ್ಬರಿ 1 ಕೋಟಿ 33 ಲಕ್ಷ ರೂಪಾಯಿ ಇತ್ತು. ಇಬ್ಬರು ಕೂಡ ಎಂದಿನಂತೆ ತಮ್ಮ ನೆಚ್ಚಿನ ಹಾವೇರಿ ಹೊರವಲಯದಲ್ಲಿರುವ ಧಾಬಾದ ಹೊರಭಾಗದಲ್ಲಿ ಟೀ ಕುಡಿಯುತ್ತಾರೆ.

ಈ ವೇಳೆ ಹನುಮಂತ ತನ್ನ ಗೆಳೆಯನಾದ ಹಿರೇಕೆರೂರ ಮೂಲದ ಶಿವರಾಜುಗೆ ಕರೆ ಮಾಡುತ್ತಾನೆ. ಈತನ ಕರೆಗಾಗಿ ಕಾದು ಕೂತಿದ್ದ ಶಿವರಾಜು, ತನ್ನ ಜೊತೆಗೆ ಶಿವಕುಮಾರ್​, ಚಂದ್ರು, ಸಂಜೀವ್ ಹಾಗೂ ಪವನ್ ಕರೆದುಕೊಂಡು ನೇರವಾಗಿ ಟೀ ಅಂಗಡಿ ಹತ್ತಿರ ಬರುತ್ತಾರೆ. ಇವನು ಯಾರು ಗೊತ್ತೆ ಇಲ್ಲ ಎಂಬಂತೆ ಅವರು ಟೀ ಕುಡಿಯುತ್ತಿರುವಾಗ ಗೋವಿಂದನನ್ನು ದೂರ ನಿಲ್ಲಿಸಿ ಹನುಮಂತ ಈತನೊಬ್ಬನೆ ಅವರ ಬಳಿ ಹೋಗಿ ಮಾಡಿರುವ ಪ್ಲ್ಯಾನ್ ಬಗ್ಗೆ ಮಾಹಿತಿ ಹೇಳಿ. ಮುಂದೆ ಹೋಗಿ ನಿಲ್ಲುವಂತೆ ಹೇಳುತ್ತಾನೆ. ಬಳಿಕ ಗೋವಿಂದ ಮತ್ತು ಹನುಮಂತ ಕ್ಯಾಂಟರ್ ಹತ್ತಿ ಚೆನೈ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಆ ಸಂದರ್ಭದಲ್ಲಿ ಸ್ವಲ್ಪ ದೂರ ಹೊದ ಬಳಿಕ ರೆಸ್ಟ್ ರೂಂ ಗೆ ಹೋಗಬೇಕೆಂದು ಗಾಡಿ ನಿಲ್ಲಿಸಲು ಹೇಳುತ್ತಾನೆ. ಎನೂ ಕಾಣದೆ ಇರುವ ಕತ್ತಲೆಯಲ್ಲಿ ಗಾಡಿ ಸೈಡ್ ಗೆ ನಿಲ್ಲಿಸುತ್ತಿದ್ದಂತೆ ಹನುಮಂತನ ಗ್ಯಾಂಗ್ ಗೊವಿಂದನ ಮೇಲೆ ಅಟ್ಯಾಕ್ ಮಾಡಿ ಹೊಡೆದು ಸಾಯಿಸಿ, ಆತನನನ್ನು ರಸ್ತೆಯ ಬದಿಯಲ್ಲೆ ಒಗೆದು, ಆತನ ವಾಹನದಲ್ಲಿರುವ ಕಬ್ಬಿಣವನ್ನು ಜೆಸಿಬಿ ಮೂಲಕ ಬೇರೆ ವಾಹನಕ್ಕೆ ಹಾಕಿ ಕದ್ದೊಯ್ಯುತ್ತಾರೆ.

ಇನ್ನು ಈ ಕುರಿತು ಜೂನ್ 15ರಂದು ಲಾಜಿಸ್ಟಿಕ್ ಸಂಸ್ಥೆಯ ಮಾಲಿಕ ಮಹೇಶ್ ಭೊಸ್ಲೆ ಹಾವೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಎಚ್ಚೆತ್ತ ಹಾವೇರಿ ಪೋಲಿಸರು, ಎಸ್​ಪಿ ಡಾ. ಶಿವಕುಮಾರ ಗುಣಾರೆ ನೇತೃತ್ವದಲ್ಲಿ ಖದೀಮರ ಹುಡುಕಾಟಕ್ಕೆ ಬಲೆ ಬಿಸುತ್ತಾರೆ. ಇಷ್ಟು ದೊಡ್ಡ ಮಟ್ಟದ ಕಬ್ಬಿಣ ಒಮ್ಮೆಲೆ ಎಲ್ಲಿ ಮಾರಾಟ ಮಾಡುವುದು ಎಂದು ತಿಳಿಯದೆ, ಹಿರೆಕೇರೂರ ಹೊರಭಾಗದ ಜಮೀನಿನಲ್ಲಿ ಟ್ರಕ್ ಸಮೇತ ನಿಲ್ಲಿಸಿರುತ್ತಾರೆ. ತಾಂತ್ರಿಕತೆ ಹಾಗೂ ಸಿಸಿ ಕ್ಯಾಮರಾ ಸಹಾಯದಿಂದ ಕೇವಲ ಮೂರು ದಿನದಲ್ಲಿ 6 ಜನರ ಪೈಕಿ ಐದು ಆರೋಪಿಗಳನ್ನು ಬಂಧಿಸಿ, ಕೊಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹಾವೇರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.