ಹಳಿಯಾಳ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸುವಿಕೆ ಕುರಿತು ಸಭೆ

ಹಳಿಯಾಳ : ಪಟ್ಟಣದಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಳಿಯಾಳ ಪಟ್ಟಣದ ಮರಾಠಾ ಭವನದಲ್ಲಿ ಪೊಲೀಸ್ ಇಲಾಖೆ ಮತ್ತು ಹಳಿಯಾಳ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಹಳಿಯಾಳ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಮೀತಿ ಮೀರಿದ್ದು, ಈ ನಿಟ್ಟಿನಲ್ಲಿ ಪಟ್ಟಣದ ವನಶ್ರೀ ವೃತ್ತದಿಂದ ಕೆಡಿಸಿಸಿ ಬ್ಯಾಂಕ್ ವರೆಗೆ ಮುಖ್ಯ ರಸ್ತೆಯ ಬಲಬದಿಯಲ್ಲಿ ಅಂದರೆ ಸಾರಿಗೆ ಬಸ್ ನಿಲ್ದಾಣವಿರುವ ಬದಿಯಲ್ಲಿ ಮಾತ್ರ ದ್ವಿಚಕ್ರ ವಾಹನಗಳು ಪಾರ್ಕಿಂಗ್ ಮಾಡಬೇಕು. ನಾಲ್ಕು ಚಕ್ರ ಹಾಗೂ ಇನ್ನಿತರ ವಾಗಹನಗಳು ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯ್ತು. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸದಿದ್ದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಹಳಿಯಾಳ ಪೊಲೀಸ್ ಠಾಣೆಯ ಪಿಎಸೈ ವಿನೋದ್.ಎಸ್.ಕೆ, ತನಿಖಾ ವಿಭಾಗದ ಪಿಎಸೈ ಅಮೀನ್ ಅತ್ತಾರ್, ಸಾರಿಗೆ ಘಟಕದ ವ್ಯವಸ್ಥಾಪಕರಾದ ಗಣೇಶ್ ಜಾವಳ್ಳಿ, ಹಳಿಯಾಳ ಪುರಸಭೆಯ ಅಧಿಕಾರಿ ದರ್ಶಿತಾ, ವಿವಿಧ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.