ಕಾರವಾರ: ಶಕ್ತಿ ಯೋಜನೆಯಿಂದ ದುಡಿಯುವ ಶಕ್ತಿ ಕಳೆದುಕೊಂಡ ಆಟೋ ಚಾಲಕರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಶಕ್ತಿ ತುಂಬಲಿ: ದಿಲೀಪ್ ಅರ್ಗೇಕರ್

ಕಾರವಾರ: ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ಘೋಷಿಸಿದ್ದು ಆಟೋ ಚಾಲಕ ಮತ್ತು ಮಾಲಕರ ಜೀವನದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸರ್ಕಾರ ನೆರವಿಗೆ ಬರಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಒತ್ತಾಯಿಸಿದ್ದಾರೆ.

ಶಕ್ತಿ ಯೋಜನೆಯನ್ನು ಜಾರಿ ಮಾಡಿದ ಪರಿಣಾಮ ಮಹಿಳೆಯರು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಮಹಿಳೆಯರು ಬಸ್ ಪ್ರಯಾಣ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಆಟೋರಿಕ್ಷಾಗಳಿಗೆ ಗ್ರಾಹಕರಿಲ್ಲದೆ ತೊಂದರೆ ಅನುಭವಿಸುವಂತೆ ಆಗಿದೆ. ವಾಹನಗಳ ನಿರ್ವಹಣೆ ಇನ್ಶೂರೆನ್ಸ್ ಮತ್ತು ಇತರ ನಿರ್ವಹಣಾ ವೆಚ್ಚವು ಅಧಿಕವಾಗಿದ್ದು ಆಟೋರಿಕ್ಷಾ ಚಾಲಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಹಿಂದೆ ದಿನಪೂರ್ತಿ ದುಡಿದರು ಜೀವನ ನಿರ್ವಹಣೆಯಷ್ಟು ಮಾತ್ರ ಗಳಿಕೆಯಾಗುತ್ತಿತ್ತು. ಈಗ ಅದು ಇಲ್ಲವಾಗಿದೆ.
ಸರ್ಕಾರದ ಯಾವುದೇ ಯೋಜನೆಗಳು ಬಡಜನರ ಪರವಾಗಿದ್ದು ಅದನ್ನು ನಾವು ಪೂರ್ಣವಾಗಿ ವಿರೋಧಿಸುವುದಿಲ್ಲ. ಆದರೆ ಈ ಯೋಜನೆಗಳಿಂದ ಬಡವರೇ ಆಗಿರುವ ಇನ್ನೊಂದು ವರ್ಗಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆ ಆಟೋ ಚಾಲಕರಿಗೆ ಕನಿಷ್ಠ 10,000 ಮಾಸಿಕ ಪ್ಯಾಕೇಜ್ ಘೋಷಣೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಕೆಲ ಆಟೋ ಚಾಲಕರು ಕೂಲಿ ಕೆಲಸಕ್ಕೆ ಇಳಿದಿದ್ದಾರೆ. ನಿರ್ವಹಣೆ ಇಲ್ಲದೆ ವಾಹನಗಳು ಹಾಳಾಗುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಅನಾರೋಗ್ಯ ಮದುವೆ ಮತ್ತಿತರ ಕಾರಣಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು ಈಗ ದುಡಿಮೆಯು ಇಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುವಂತಾಗಿದೆ. ಎಲ್ಲಾ ಕುಟುಂಬಗಳ ಮಹಿಳೆಯರು ಉಚಿತ ಪ್ರಯಾಣವನ್ನು ಅನುಭವಿಸುತ್ತಿದ್ದಾರೆ. ಆದರೆ ಆಟೋ ಚಾಲಕರ ಕುಟುಂಬದ ಮಹಿಳೆಯರು ಸಂಕಷ್ಟದಲ್ಲಿ ಹೊಟ್ಟೆಗೆ ಹಿಟ್ಟಿಲ್ಲವೆಂದು ಅಂಗಲಾಚುವ ಪರಿಸ್ಥಿತಿ ಬಂದಿದೆ. ನಾವು ಸ್ವಾಭಿಮಾನದಿಂದ ದಿನವಿಡಿ ದುಡಿಯುತ್ತಿದ್ದೆವು. ಸರ್ಕಾರದ ಯೋಜನೆ ಅದಕ್ಕೆ ಅಡ್ಡಿಯಾಗಿದೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಇಲ್ಲವೇ ಪರ್ಯಾಯಮಾರ್ಗವನ್ನು ಶೀಘ್ರದಲ್ಲಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಆಟೋ ಚಾಲಕರು ಮತ್ತು ಮಾಲಕರು ಆರ್ಥಿಕ ಸಂಕಷ್ಟದಿಂದ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದರಾಗಬಹುದು ಎಂದು ದಿಲೀಪ್ ಅರ್ಗೇಕರ್ ಎಚ್ಚರಿಸಿದ್ದಾರೆ.