ಚಿತ್ರದುರ್ಗ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಕರ್ನಾಟಕ ಮೂಲದ ನಾಗ ಸಾಧು ಸಾವನ್ನಪ್ಪಿರುವ ಪ್ರಕರಣತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ಕಳೆದ 7 ವರ್ಷಗಳಿಂದ ನೆಲೆಸಿದ್ದ ನಾಗಸಾಧು ರಾಜನಾಥ್ ಮಹಾರಾಜ್(49) ಕಾಲ್ತುಳಿತಕ್ಕೆ ಸಿಲುಕಿ ದುರ್ಮರಣಕ್ಕಿಡಾಗಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದ ರಾಜನಾಥ್ ಮಹಾರಾಜ್ ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀಗಳ ಒಡನಾಡಿಯಾಗಿದ್ದರು.
ಇವರ ಸಾವಿನ ಬಗ್ಗೆ ಉತ್ತರಪ್ರದೇಶದ ಪೊಲೀಸರು, ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಜನಾಥ್ ಸಾವಿನ ಬಗ್ಗೆ ಖಚಿತ ಪಡಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗದಲ್ಲಿ ಲಂಬಾಣಿ ಗುರುಪೀಠದ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ʻಪಬ್ಲಿಕ್ ಟಿವಿʼಜೊತೆಗೆ ಮಾತನಾಡಿದ್ದಾರೆ.

ಚಿತ್ರದುರ್ಗಕ್ಕೆ ರಾಜನಾಥ್ ಮಹಾರಾಜರ ಪಾರ್ಥಿವ ಶರೀರವನ್ನು ತಲುಪಿಸುವಂತೆ ಉತ್ತರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಕ್ಕೆ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಮನವಿ ಮಾಡಿದ್ದಾರೆ. ಅಲ್ಲದೇ ಕಾಲ್ತುಳಿತದಿಂದ ಸಾವುನೋವಾಗದಂತೆ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.