ಪ್ರಾಣಿಲೋಕದ ಆಹಾರ ಸರಪಳಿಯಲ್ಲಿ ಅತ್ಯಂತ ಎತ್ತರದ ಸ್ಥಾನವೇರಿ ಕುಳಿತಿರುವ ಮನುಷ್ಯನಿಗೂ ಅವನ ಬಹುಹತ್ತಿರದ ಸಂಬಂಧಿ ಚಿಂಪಾಝೀಗೂ DNAಯಲ್ಲಿ ಇರುವ ಸಾಮ್ಯ ಶೇ. 99. ಅಂದರೆ ಕೇವಲ ಶೇ. 1 ರಷ್ಟು ಮಾರ್ಪಾಡು ಎಷ್ಟೊಂದು ವ್ಯತ್ಯಾಸಗಳಿಗೆ ಕಾರಣವಾಗಿದೆಯಲ್ಲವೇ? ಅದು ನಮ್ಮ ಇಂದಿನವರೆಗಿನ ಏಳ್ಗೆಗೆ ಕಾರಣವಾಗಿದ್ದಂತೂ ಹೌದು, ಆದರೆ ನಮ್ಮ ಅಪರಿಮಿತ “ಬುದ್ಧಿಮತ್ತೆ” ಹಾಗೂ ಕಾರ್ಯಕ್ಷಮತೆ ನಮ್ಮ ವಿನಾಶಕ್ಕೂ ಕಾರಣವಾಗಬಹುದೆಂಬುದೂ ಅಷ್ಟೇ ಸತ್ಯ. ಪ್ರಕೃತಿಯನ್ನೇ ಎದುರಿಸಿ ನಿಂತು ಎಲ್ಲವನ್ನೂ ನಿಯಂತ್ರಿಸುತ್ತೇವೆಂದು ಹೊರಟಿರುವ ನಾವು ನಿಜಕ್ಕೂ ಬುದ್ಧಿವಂತರೇ? ಗೊತ್ತಿಲ್ಲ. ಅದಿರಲಿ.
ನಮ್ಮ ವಿಕಸಿತ ಮಿದುಳಿನ ಬಲದಿಂದ ಮತ್ತು ನಾವು ಕಟ್ಟಿಕೊಂಡಿರುವ ನುಡಿಗಳ ಸಹಾಯದಿಂದ ನಾವು ಜಗತ್ತನ್ನು ಅರಿಯುವುದಲ್ಲದೇ ಒಬ್ಬರಿನ್ನೊಬ್ಬರ ಜೊತೆ ಸಂವಹಿಸಿ ಜಗತ್ತನ್ನು ಆಳುತ್ತಿದ್ದೇವೆ. ಅದರೆ ಇವು ನಮ್ಮ ಸ್ವತ್ತಷ್ಟೇ ಅಲ್ಲ. ಆನೆಗಳು, ಡಾಲ್ಫಿನ್‌ಗಳು, ತಿಮಿಂಗಿಲಗಳು ಮೊದಲಾದ ಪ್ರಾಣಿಗಳು ಅಸಾಧ್ಯ ನೆನಪಿನ ಶಕ್ತಿ ಪ್ರದರ್ಶಿಸುತ್ತವೆ. ಎಲ್ಲ ಸ್ತನಿಗಳೂ ಭಾವಜೀವಿಗಳು.
ವಿಷಯ ಅದಲ್ಲ. ನಿನ್ನ ಕೈಚೀಲದಲ್ಲಿರುವ ಕ್ಯಾಂಡಿ ಬೇಕು, ಅದನ್ನು ತೆಗೆದು ಕೊಡು ಎಂದು ಝೂನಲ್ಲಿರುವ ಒರ್‍ಯಾಂಗುಟಾನ್ ಪ್ರವಾಸಿಗಳಿಗೆ “ಹೇಳುತ್ತಿರುವ” ವಿಡಿಯೋವನ್ನು ನೋಡಿ ಜನ ನಿಬ್ಬೆರಗಾಗಿದ್ದಾರೆ. ಇಂಡೊನೇಶಿಯ ಮತ್ತು ಮಲೇಶಿಯಾದ ಮಳೆಕಾಡುಗಳಲ್ಲಿ ನೆಲೆಸಿರುವ ಒರ್‍ಯಾಂಗುಟಾನ್‌ಗಳು ದೊಡ್ಡ ಕಪಿಗಳ ಪ್ರಬೇಧಕ್ಕೆ ಸೇರಿದ ಪ್ರಾಣಿಗಳು. ಮಲಯ್ ಭಾಷೆಯಲ್ಲಿ ಒರ್‍ಯಾಂಗ್ ಎಂದರೆ ವ್ಯಕ್ತಿ, ಹುಟಾನ್ ಎಂದರೆ ಕಾಡು: ಎಂದರೆ ಇವು ಶಬ್ದಶಃ “ಕಾಡುಮನುಷ್ಯರು”. ತಪ್ಪೇನಿಲ್ಲ ಬಿಡಿ. ಮೇಲಿನ ವಿಡಿಯೋ ನೋಡಿದರೆ ನೀವು ಇದು ಮನುಷ್ಯರಂತೆ ವರ್ತಿಸುತ್ತಿದೆಯಲ್ಲ ಎಂದುಕೊಳ್ಳುತ್ತೀರಿ.