ಸಿನಿಮಾ ಕೆಲಸಗಳ ಬ್ಯುಸಿ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಕಾಡಿಗೆ ನುಗ್ಗಿದ್ದಾರೆ. ಮಕ್ಕಳಿಗೆ ಲೈವ್ ಆಗಿ ಕಾಡು ಪ್ರಾಣಿಗಳನ್ನು ತೋರಿಸಲು ಕುಟುಂಬ ಸಮೇತ ನಾಗರಹೊಳೆ ಕಾಡಿಗೆ ಬಂದಿದ್ದ ಅವರು, ಸತತ ಮೂರು ದಿನಗಳ ಕಾಲ ಸಫಾರಿ ಮಾಡಿದ್ದಾರೆ. ನಾನಾ ಪ್ರಾಣಿಗಳನ್ನು ಕಣ್ತುಂಬಿ ಕೊಂಡ ಯಶ್ ಕುಟುಂಬ, ಹುಲಿ ಸಿಗದೇ ಹೋದ ಕಾರಣಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೋನಾದಿಂದಾಗಿ ಮೈಸೂರು ಕಡೆ ಪ್ರವಾಸ ಮಾಡಲು ಯಶ್ ಗೆ ಆಗಿರಲಿಲ್ಲವಂತೆ. ಹಾಗಾಗಿ ಇಬ್ಬರು ಮಕ್ಕಳು, ಪತ್ನಿ ರಾಧಿಕಾ ಪಂಡಿತ್ ಮತ್ತು ಅತ್ತೆ, ಮಾವನ ಜೊತೆ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಸುತ್ತ ಮುತ್ತಲಿನ ಸ್ಥಳಗಳನ್ನು ಮಕ್ಕಳಿಗೆ ತೋರಿಸಿದರು. ಅದರಲ್ಲೂ ಮಕ್ಕಳಿಗೆ ಇದು ಮೊದಲ ರಿಯಲ್ ಫಾರೆಸ್ಟ್ ಪ್ರವಾಸವಾಗಿದ್ದರಿಂದ ಆ ಸಂಭ್ರಮವನ್ನು ಹಂಚಿಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್, ‘ನಾವು ಮತ್ತು ಮಕ್ಕಳು ಕೂಡ ಸಫಾರಿ ಎಂಜಾಯ್ ಮಾಡಿದ್ರು. ಸಫಾರಿಯಲ್ಲಿ ಜಿಂಕೆ, ಕರಡಿ, ಆನೆ ಎಲ್ಲೂ ಕಂಡವು. ಹುಲಿಯೊಂದು ಸಿಗಲಿಲ್ಲ, ಬೇಜಾರಾಯ್ತು.ಇವತ್ತೂ ಸಫಾರಿ ಮಾಡಬೇಕಿತ್ತು, ಮಳೆ ಕಾರಣಕ್ಕೆ ಹೋಗಲಿಲ್ಲ. ಮುಂದೆ ಮತ್ತೆ ಸಫಾರಿ ಮಾಡಿ ನೋಡಿದ್ರಾಯ್ತು ಅಂತ ಬಂದೆವು’ ಎಂದಿದ್ದಾರೆ.