ನಟಿ ಕೃತಿ ಸನೋನ್ ಅವರ ಅಭಿಮಾನಿಗಳು ‘ಆದಿಪುರುಷ್’ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ಈ ಚಿತ್ರವನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿದ ಈ ಸಿನಿಮಾದಲ್ಲಿ ಕೃತಿ ಸನೋನ್ ಅವರು ಸೀತೆಯ ಪಾತ್ರ ಮಾಡಿದ್ದಾರೆ. ಯಾರು ಎಷ್ಟೇ ಟೀಕಿಸಿದರೂ ಕೃತಿ ಸನೋನ್ ಅವರಿಗೆ ತಮ್ಮ ಸಿನಿಮಾ ಮೇಲಿನ ಹೆಮ್ಮೆಯ ಭಾವನೆ ಕುಗ್ಗಿಲ್ಲ. ‘ಆದಿಪುರುಷ್’ ಚಿತ್ರವನ್ನು ಶಾಲೆಯ ಮಕ್ಕಳಿಗೆ ತೋರಿಸಲು ಅವರು ನಿರ್ಧರಿಸಿದ್ದಾರೆ. ಕೃತಿ ಸನೋನ್ ಅವರು ಓದಿದ್ದು ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ. ಆ ಶಾಲೆಯ ಮಕ್ಕಳಿಗಾಗಿ ಅವರು ದೆಹಲಿಯ ಮಲ್ಟಿಪ್ಲೆಕ್ಸ್ನಲ್ಲಿ ಒಂದು ಪೂರ್ತಿ ಶೋನ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ವರದಿ ಆಗಿದೆ.
‘ಆದಿಪುರುಷ್’ ಸಿನಿಮಾವನ್ನು ಮಕ್ಕಳು ಸಖತ್ ಎಂಜಾಯ್ ಮಾಡುತ್ತಾರೆ ಎಂಬುದು ಕೃತಿ ಸನೋನ್ ನಂಬಿಕೆ. ಹಾಗಾಗಿ ತಾವು ಓದಿದ ಶಾಲೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವರು ಮುಂದಾಗಿದ್ದಾರೆ. ಈ ವೇಳೆ ಅವರು ಕೂಡ ಮಕ್ಕಳ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ. ಆ ಬಳಿಕ ಅಲ್ಲಿಯೇ ಸಂವಾದ ಕೂಡ ನಡೆಸಲಿದ್ದಾರೆ. ಅದಕ್ಕಾಗಿ ಮಲ್ಟಿಪ್ಲೆಕ್ಸ್ನಲ್ಲಿ ಸಕಲ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ರಾಮನ ಪಾತ್ರವನ್ನು ಪ್ರಭಾಸ್ ಮಾಡಿದ್ದಾರೆ.
ರಾಮಾಯಣವನ್ನು ಸರಿಯಾಗಿ ತೋರಿಸಿಲ್ಲ ಎಂಬ ಕಾರಣಕ್ಕೆ ‘ಆದಿಪುರುಷ್’ ಸಿನಿಮಾವನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಪ್ರತಿ ಪಾತ್ರದಲ್ಲೂ ತಪ್ಪು ಹುಡುಕಲಾಗುತ್ತಿದೆ. ಸಂಭಾಷಣೆ ಕೂಡ ಕಳಪೆ ಆಗಿದೆ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಸಹ ಕೆಲವರು ಒತ್ತಾಯಿಸಿದ್ದಾರೆ. ಇಷ್ಟೆಲ್ಲ ಟೀಕೆ ಎದುರಾದರೂ ಕೂಡ ಅವುಗಳ ಬಗ್ಗೆ ಕೃತಿ ಸನೋನ್ ತಲೆ ಕೆಡಿಸಿಕೊಡಿಲ್ಲ. ಅವರು ಕೇವಲ ಪಾಸಿಟಿವ್ ಪ್ರತಿಕ್ರಿಯೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ. ಜನರು ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಖುಷಿಪಡುತ್ತಿರುವ ಕೆಲವು ವಿಡಿಯೋ ತುಣುಕುಗಳನ್ನು ಕೃತಿ ಸನೋನ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಬಾಲಿವುಡ್ನಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಕೃತಿ ಸನೋನ್ ಗುರುತಿಸಿಕೊಂಡಿದ್ದಾರೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ಅವರಿಗೆ ಪೌರಾಣಿಕ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು. ಜನರ ನಿರೀಕ್ಷೆಯಂತೆ ಸಿನಿಮಾ ಮೂಡಿಬಂದಿದ್ದರೆ ಕೃತಿ ಅವರ ಖ್ಯಾತಿ ಹೆಚ್ಚುತ್ತಿತ್ತು. ಆದರೆ ನಿರ್ದೇಶಕರು ಆಧುನಿಕ ಶೈಲಿಯಲ್ಲಿ ರಾಮಾಯಣದ ಕಥೆ ಹೇಳಲು ಪ್ರಯತ್ನಿಸಿರುವುದನ್ನು ಪ್ರೇಕ್ಷಕರು ವಿರೋಧಿಸುತ್ತಿದ್ದಾರೆ. ಕೃತಿ ಸನೋನ್ ಅವರಿಗೆ ಈ ಚಿತ್ರದಲ್ಲಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ದಿನದಿಂದ ದಿನಕ್ಕೆ ‘ಆದಿಪುರುಷ್’ ಕಲೆಕ್ಷನ್ ತಗ್ಗುತ್ತಿದೆ.