ಬೆಂಗಳೂರು: ತಾವು ಪ್ರತಿನಿಧಿಸುತ್ತಿರುವ ವರುಣ ವಿಧಾನ ಸಭಾ ಕ್ಷೇತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಮುಖ್ಯಮಂತ್ರಿ ಸಚಿವಾಲಯ ಕಾರ್ಯನಿರ್ವಹಣೆಗೆ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿರುವ ಸಿದ್ದರಾಮಯ್ಯ, ವರುಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿ ಕೆಎನ್ ವಿಜಯ್ಗೆ ವರುಣ ಕ್ಷೇತ್ರದ ಜವಾಬ್ದಾರಿ ನೀಡಿದ್ದು, ಕ್ಷೇತ್ರದ ಎಲ್ಲ ವಿಷಯಗಳ ನಿರ್ವಹಣೆಗೆ ಸೂಚನೆ ನೀಡಿದ್ದಾರೆ.
ಇಷ್ಟೇ ಅಲ್ಲದೆ ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳಿಗೆ ವಲಯವಾರು ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಕಂದಾಯ ವಿಭಾಗವಾರು ಜವಾಬ್ದಾರಿ ಹಂಚಿಕೆ ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ. ಸಂಸದರು, ಶಾಸಕರ ಕುಂದುಕೊರತೆ, ಅನುದಾನಕ್ಕೆ ಸಂಬಂಧಪಟ್ಟಂತೆ ನಿರ್ವಹಣೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕಲಬುರಗಿ, ಮೈಸೂರು, ಬೆಳಗಾವಿ, ಬೆಂಗಳೂರು ವಿಭಾಗಕ್ಕೆ ಪ್ರತ್ಯೇಕವಾಗಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಭಾಗದ ಶಾಸಕರು ಹಾಗೂ ಸಂಸದರ ಕುಂದುಕೊರತೆಗಳನ್ನು, ಕ್ಷೇತ್ರದ ಸಮಸ್ಯೆಗಳನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ದಿನನಿತ್ಯದ ಮಾಧ್ಯಮಗಳ ವರದಿಗಳಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕೂ ಅಧಿಕಾರಿಯೊಬ್ಬರಿಗೆ ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ಸರ್ಕಾರದ ಜೊತೆಗೆ ಪತ್ರ ವ್ಯವಹಾರ ನಡೆಸಲು ಸಿಎಂ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂಬುದು ಆದೇಶದ ಪ್ರತಿಯಿಂದ ತಿಳಿದುಬಂದಿದೆ.