ನವದೆಹಲಿ: ವಿಶ್ವಾದ್ಯಂತ 200ಕ್ಕೂ ಹೆಚ್ಚು ಮಂದಿಗೆ ಕಾರಣ ಎನ್ನಲಾದ ಕಳಪೆ ದರ್ಜೆಯ ಕೆಮ್ಮಿನ ಸಿರಪ್ಗಳು (Cough Syrup) 20 ಕಂಪನಿಗಳಿಂದ ಪೂರೈಕೆ ಆಗಿರುವುದು World Health Organisation ನಡೆಸಿದ ತನಿಖೆ ಪತ್ತೆ ಮಾಡಿದೆ. 20 ಔಷಧಗಳಿಂದ ಈ ಸಾವಾಗಿದ್ದು ಇದರಲ್ಲಿ ಏಳು ಔಷಧಗಳು ಭಾರತೀಯ ಕಂಪನಿಗಳಿಂದ ತಯಾರಿಸಲಾಗಿದೆ. ಇನ್ನುಳಿದ 13 ಸಿರಪ್ಗಳು ಇಂಡೋನೇಷ್ಯಾದಿಂದ ಸರಬರಾಜು ಆಗಿವೆ ಎಂದು ಡಬ್ಲ್ಯೂಎಚ್ಒ ಅಧಿಕಾರಿಗಳು ಹೇಳಿದ್ದಾರೆ ಎನ್ಡಿಟಿವಿ ವರದಿ ಮಾಡಿದೆ.
ಹಲವು ಆಫ್ರಿಕನ್ ದೇಶಗಳಲ್ಲಿ ಕೆಮ್ಮಿನ ಸಿರಪ್ ಕುಡಿದು ಜನರ ಸಾವನ್ನಪ್ಪಿದ ಘಟನೆಗಳು ವರದಿಯಾಗಿದ್ದವು. ಈ ಸಿರಪ್ಗಳು ಭಾರತದಲ್ಲಿ ತಯಾರಾಗಿದ್ದವು ಎಂದೂ ಆರೋಪಿಸಲಾಗಿತ್ತು. ಡಬ್ಲ್ಯೂಎಚ್ಒನ ತಂಡವೊಂದು ಈ ಘಟನೆಯ ತನಿಖೆ ನಡೆಸಿದೆ. ಡೈಎತಿಲಿನ್ ಮತ್ತು ಎತಿಲಿನ್ ಗ್ಲೈಕೋಲ್ ಅಂಶಗಳು ಈ ಸಿರಪ್ನಲ್ಲಿ ಅಧಿಕವಾಗಿದ್ದರಿಂದ ಅದನ್ನು ಕುಡಿದ ಜನರಿಗೆ ಸಾವಾಗಿದೆ ಎಂಬ ಸಂಗತಿಯನ್ನು ಡಬ್ಲ್ಯುಎಚ್ಒ ತನಿಖೆಯಿಂದ ತಿಳಿದುಬಂದಿದೆ.
ಒಟ್ಟು 20 ಕೆಮ್ಮಿನ ಸಿರಪ್ಗಳನ್ನು ತನಿಖೆಯಲ್ಲಿ ಹೆಸರಿಸಲಾಗಿದೆ. 7 ಸಿರಪ್ಗಳು ಮೇಡ್ ಇನ್ ಇಂಡಿಯಾದ್ದಾದರೆ, 13 ಸಿರಪ್ಗಳು ಇಂಡೋನೇಷ್ಯಾ ಕಂಪನಿಗಳಿಂದ ತಯಾರಿಸಲಾಗಿದ್ದಾಗಿವೆ. ಭಾರತದ ಆ ಏಳು ಕಳಂಕಿತ ಸಿರಪ್ಗಳನ್ನು ತಯಾರಿಸಿದ್ದು ಹರ್ಯಾಣ ಮೂಲದ ಮೇಡನ್ ಫಾರ್ಮಾಸ್ಯೂಟಿಕಲ್ಸ್, ಮಾರಿಯಾನ್ ಬಯೋಟೆಕ್, ಕ್ಯೂಪಿ ಫಾರ್ಮಾ ಕೆಮ್ ಈ ಮೂರು ಕಂಪನಿಗಳು ಎಂದೆನ್ನಲಾಗಿದೆ.
ಇಷ್ಟಾದರೂ ಕೆಮ್ಮಿನ ಸಿರಪ್ ಕುಡಿದು ಜನರು ಸಾವನ್ನಪ್ಪುತ್ತಿರುವ ಘಟನೆಗಳು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೇ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು 12 ಮಕ್ಕಳು ಸಾವನ್ನಪ್ಪಿದ್ದಾರೆನ್ನಲಾಗಿದೆ. ಅಲ್ಲಿನ ಅಧಿಕಾರಿಗಳು ಈ ಸಾವಿಗೆ ಭಾರತೀಯ ಸಿರಪ್ಗಳೇ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ಅಲ್ಲಿನ ಅಧಿಕಾರಿಗಳು ಈ ಸಿರಪ್ಗಳ ಫೋಟೋ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ಸಿರಪ್ ಅನ್ನು ಮಧ್ಯಪ್ರದೇಶದ ರೀಮ್ಯಾನ್ ಲ್ಯಾಬ್ಸ್ ಸಂಸ್ಥೆ ತಯಾರಿಸುವ ಔಷಧಕ್ಕೆ ಹೋಲುತ್ತದೆ.
ಈ ಬಗ್ಗೆ ರೀಮ್ಯಾನ್ ಸಂಸ್ಥೆಯ ನಿರ್ದೇಶಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೆಮ್ಮಿನ ಸಿರಪ್ ತಮ್ಮದಕ್ಕೆ ಹೋಲುತ್ತದೆಯಾದರೂ ಅದು ನಕಲಿಯಾಗಿದ್ದಿರಬಹುದು ಎಂದು ಶಂಕಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಬಹಳ ಕಠಿಣವಾದ ಕ್ವಾಲಿಟಿ ಕಂಟ್ರೋಲ್ ವ್ಯವಸ್ಥೆ ಇದ್ದು ಕಳಪೆ ದರ್ಜೆಯ ಉತ್ಪನ್ನಕ್ಕೆ ಅವಕಾಶವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.