ಯಾದಗಿರಿ: ಆತ ತಾನಾಯ್ತು ತನ್ನ ಕೆಲಸ ಆಯ್ತು ಎಂದು ಕುಟುಂಬಸ್ಥರ ಜೊತೆ ಕೃಷಿ ಕಾಯಕ ಮಾಡಿಕೊಂಡು ಜೀವನ ಮಾಡುತ್ತಿದ್ದ. ಈ ಮಧ್ಯೆ ಕಳೆದ 10 ವರ್ಷಗಳ ಹಿಂದೆ ಸಂಬಂಧಿಕರಲ್ಲಿ ಸಹೋದರರು ಆಗಬೇಕಿದ್ದವರ ಜೊತೆಗೆ ಆಸ್ತಿ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ. ಇದರ ಜೊತೆಗೆ ಹಳೆ ದ್ವೇಷ ಹಿನ್ನಲೆ ಆತನ ಕೊಲೆ ಗೆ ಇನ್ನೊಂದು ಕುಟುಂಬ ಕೂಡ ಸ್ಕೇಚ್ ಹಾಕಿ ಕುಳಿತಿತ್ತು. ಕಳೆದ 10 ದಿನಗಳ ಹಿಂದೆ ಬಯಲು ಶೌಚಕ್ಕೆ ಹೋಗಿ ವಾಪಸ್ ಬರ್ತಾಯಿದ್ದ ಆತನ ಮೇಲೆ ಆರೇಳು ಜನ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದರು. ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಆತ ಇದೀಗ ಕೊನೆಯುಸಿರೆಳೆದಿದ್ದಾನೆ. ಹೌದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಕುರಿಹಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಷ್ಟಕ್ಕೂ ಇಲ್ಲಿ ಕೊಲೆಯಾಗಿರುವ ವ್ಯಕ್ತಿ ಹೆಸರು 45 ವರ್ಷದ ಮರಿಲಿಂಗಪ್ಪನೆಂದು, ಇದೇ ಗ್ರಾಮದಲ್ಲಿ 6 ರಿಂದ7 ಎಕರೆ ಜಮೀನು ಹೊಂದಿರುವ ಮರಿಲಿಂಗಪ್ಪ, ತಾನಾಯ್ತು ತನ್ನ ಕುಟುಂಬ ಆಯ್ತು ಎಂದು ಕೃಷಿ ಕಾಯಕ ಮಾಡಿಕೊಂಡು ಜೀವನ ಮಾಡುತ್ತಿದ್ದ. ಇದೆ ಜೂನ್ 8 ರ ರಾತ್ರಿ ವೇಳೆ ಮನೆಯಿಂದ ಬಯಲು ಶೌಚಕ್ಕೆ ಹೋಗಿದ್ದ. ವಾಪಸ್ ಬರುವಾಗ ಆರೇಳು ಜನರ ತಂಡ ಏಕಾಏಕಿ ಮರಿಲಿಂಗಪ್ಪನ ಮೇಲೆ ದಾಳಿ ಮಾಡಿದೆ. ಕೈಯಲ್ಲಿ ಚಾಕು ಹಿಡಿದುಕೊಂಡು ಕೊಲೆ ಮಾಡಲೆಬೇಕೆಂದು ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದ ಈ ತಂಡ, ರಾತ್ರಿ ವೇಳೆ ನಮಗೆ ನೋಡಿದ್ರೆ ಮರಿಲಿಂಗಪ್ಪ ಓಡಿ ಹೋಗುತ್ತಾನೆ ಅಂದುಕೊಂಡು ಪಕ್ಕದಲ್ಲೇ ಇದ್ದ ವಿದ್ಯುತ್ ಟ್ರಾನ್ಸಫಾರಂನಿಂದ ಪ್ಯೂಸ್ ತೆಗೆದಿದ್ದರು.
ಇದರಿಂದ ಇಡೀ ಗ್ರಾಮವೆ ಕತ್ತಲೆಯಿಂದ ಕೂಡಿತ್ತು, ಮರಿಲಿಂಗಪ್ಪ ಬರ್ತಾಯಿದ್ದ ಹಾಗೆ ಗ್ಯಾಂಗ್ ಕೈಯಲ್ಲಿದ್ದ ಚಾಕುವಿನಿಂದ ಮರಿಲಿಂಗಪ್ಪನ ಹೊಟ್ಟೆಗೆ ಹಾಕಿದ್ದಾರೆ. ಅಲ್ಲೆ ಪಕ್ಕದಲ್ಲಿದ್ದ ಮರಿಲಿಂಗಪ್ಪನ ಪುತ್ರ ತಂದೆಯನ್ನ ಉಳಿಸಲು ಓಡಿ ಬಂದಿದ್ದಾನೆ. ಮಗ ಉಳಿಸಲು ಬರ್ತಾಯಿದ್ದಾನೆಂದು ಮಗನಿಗೂ ಸಹ ಕೊಲೆ ಮಾಡಲು ಯತ್ನಿಸಿದ್ದಾರೆ. ಆದ್ರೆ, ಮಗ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಇತ್ತ ಚಾಕು ಇರಿತಕ್ಕೆ ಒಳಗಾಗಿದ್ದ ಮರಿಲಿಂಗಪ್ಪ ಗಾಯಗೊಂಡು ಓಡಿ ಹೋಗಿದ್ದಾನೆ. ಬಳಿಕ ಕುಟುಂಬಸ್ಥರೆಲ್ಲ ಬಂದ ಕೂಡಲೇ ಚಾಕು ಇರಿದ ಗ್ಯಾಂಗ್ ಸ್ಥಳದಿಂದ ಓಡಿ ಹೋಗಿತ್ತು.
ಇನ್ನು ಗಾಯಗೊಂಡಿದ್ದ ಮರಿಲಿಂಗಪ್ಪನಿಗೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಹೊಟ್ಟೆಯ ಭಾಗದಲ್ಲಿ ಚಾಕು ಇರಿತದಿಂದ ಗಾಯ ಹೆಚ್ಚಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ರು. ಆದ್ರೆ, ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮರಿಲಿಂಗಪ್ಪ ನಿನ್ನೆ(ಜೂ.19) ನಸುಕಿನಜಾವ ಜೀವ ಬಿಟ್ಟಿದ್ದಾನೆ.
ಆರೋಪಿಗಳ ಬಂಧನ
ಇನ್ನು ಇತ್ತ ಮರಿಲಿಂಗಪ್ಪನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸಾವಿಗೆ ಕಾರಣರಾದವರು ಬೇರೆ ಯಾರು ಅಲ್ಲ ಮರಿಲಿಂಗಪ್ಪನ ಸಹೋದರ ಸಂಬಂಧಿಕರೆ. ಮರಿಲಿಂಗಪ್ಪನ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಬಸವರಾಜ್ ಕೊಲೆಯ ಮುಖ್ಯ ಆರೋಪಿಯಾಗಿದ್ದಾನೆ. ಬಸವರಾಜ್ ಹಾಗೂ ಇತನ ಪುತ್ರ ಶಶಿಧರ ಸೇರಿ ಕೊಲೆಗೆ ಸ್ಕೇಚ್ ಹಾಕಿದ್ದರಂತೆ. ಇವರಿಬ್ಬರು ಸೇರಿದಂತೆ ಇವರದ್ದೆ ಕುಟುಂಬದ ಇನ್ನೂ 10 ಜನ ಸೇರಿ ಮರಿಲಿಂಗಪ್ಪನ ಕೊಲೆ ಮಾಡಿದ್ದಾರೆಂದು ಮೃತನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಕೊಲೆಗೆ ಕಾರಣ
ಪೊಲೀಸರು ಹೇಳುವ ಪ್ರಕಾರ ಕಳೆದ 10 ವರ್ಷಗಳ ಹಿಂದೆ ಮರಿಲಿಂಗಪ್ಪ ಹಾಗೂ ಬಸವರಾಜ್ ಮದ್ಯ ಜಮೀನಿನ ವಿಚಾರಕ್ಕೆ ಜಗಳವಾಗಿತ್ತಂತೆ. ಆಗಿನಿಂದ ಬಸವರಾಜ್ ಮರಿಲಿಂಗಪ್ಪನ ಮೇಲೆ ದ್ವೇಷ ಸಾಧಿಸುತ್ತಾ ಬಂದಿದ್ದ. ಇನ್ನು ಮರಿಲಿಂಗಪ್ಪ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗಿರೋದು ಈ ಬಸವರಾಜ್ಗೆ ಸಹಿಸಿಕೊಳ್ಳೊಕೆ ಆಗುತ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಹೇಗಾದ್ರು, ಮರಲಿಂಗಪ್ಪನನ್ನ ಕೊಲೆ ಮಾಡಬೇಕೆಂದು ಕಾದು ಕುಳಿತ್ತಿದ್ದನಂತೆ.
ಇನ್ನು ಜೂನ್ 8 ರಾತ್ರಿ ವೇಳೆ ಮರಿಲಿಂಗಪ್ಪನ ಮೇಲೆ ಚಾಕು ಇರಿದ ಪ್ರಕಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾದ ದಿನವೇ ಬಸವರಾಜ್, ಮಲ್ಲೇಶ್, ಭೀಮರಾಯ, ಹನುಮಂತ ಹಾಗೂ ಹಯ್ಯಾಳಪ್ಪ ಅವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದ್ರೆ, ಈ ಕೊಲೆಗೆ ಇವರನ್ನ ಹೊರತು ಪಡಿಸಿ ಇನ್ನು 7 ಜನ ಇದ್ದಾರೆಂದು ಕುಟುಂಬಸ್ಥರು ಆರೋಪಿಸಿ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಐದು ಜನರನ್ನ ಬಂಧಿಸಿದ್ದು, ಇನ್ನು 7 ಜನರಿಗಾಗಿ ತಲಾಷ್ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಸಣ್ಣ ಆಸ್ತಿ ವಿಚಾರಕ್ಕೆ ಕಳೆದ 10 ವರ್ಷಗಳ ಹಿಂದೆ ನಡೆದ ಜಗಳ ಅಲ್ಲಿಗೆ ಮುಗಿದು ಹೋಗಿತ್ತು. ಆದ್ರೆ, ಅದೇ ಜಗಳವನ್ನ ತಲೆಯಲ್ಲಿ ಇಟ್ಟುಕೊಂಡಿದ್ದ ಬಸವರಾಜ್ ಹಾಗೂ ಕುಟುಂಬಸ್ಥರು ಮರಿಲಿಂಗಪ್ಪನನ್ನ ಕೊಲೆ ಮಾಡಿಯೇ ಬಿಟ್ಟಿದ್ದಾರೆ. ಹೀಗಾಗಿ ಪೊಲೀಸರು ಉಳಿದ ಆರೋಪಿಗಳನ್ನ ಬಂಧಿಸಿ ಮರಿಲಿಂಗಪ್ಪನ ಕೊಲೆಯ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕಾಗಿದೆ.