ಜೋಯಿಡಾ ತಾಲೂಕು ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ, ಐತಿಹಾಸಿಕವಾಗಿ ರಾಜ್ಯದಲ್ಲಿಯೇ ಸಂಪದ್ಭರಿತವಾದ ತಾಲೂಕು. ಇಲ್ಲಿನ ವಿದ್ಯಾರ್ಥಿಗಳು ಭಾಗ್ಯವಂತರು. ಉತ್ತಮ ಜ್ಞಾನಾರ್ಜನೆ ಮೂಲಕ ಸಾಧನೆಯ ಸಾಧಕರಾಗಬೇಕೆಂದು ಲೇಖಕ, ಸಾಹಿತಿ,ಅಂಕಣಕಾರ ಡಾ: ಆರ್.ಜಿ.ಹೆಗಡೆ ಹೇಳಿದರು.
ಅವರು ಜೋಯಿಡಾ ತಾಲೂಕಾ ಕೇಂದ್ರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಜೋಯಿಡಾ ಹಾಗೂ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಸಹಯೋಗದೊಂದಿಗೆ ನಡೆದ ವಿದ್ಯಾರ್ಥಿಗಳತ್ತ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಕಥೆ ಕಟ್ಟುವ ಕುರಿತು ಕಥನಗಳು” ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ ಅಧ್ಯಕ್ಷ ಬಿ.ಎನ್.ವಾಸರೆಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ಕೊಠಡಿಯೋಳಗಿನ ಕಲಿಕೆ ಜೀವನವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಓದು ಬರಹ ನಮ್ಮ ಜೀವನದ ಭಾಗವಾಗಬೇಕಿದೆ. ಇಲ್ಲಿನ ಬುಡಕಟ್ಟುಗಳಲ್ಲಿ ಜಾನಪದ ಸಾಹಿತ್ಯ ತುಂಬಿ ತುಳುಕುತ್ತಿದೆ. ಇದನ್ನು ನಾವು ಕಲಿಯಬೇಕಿದೆ ಎಂದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ: ಅಂಜಲಿ ರಾಣೆಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ: ಶೈಲಜಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕ ಅಧ್ಯಕ್ಷ ಪಾಂಡುರಂಗ ಪಟಗಾರ ಅತಿಥಿಗಳನ್ನು ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಸುಭಾಷ ಗಾವಡಾ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ರಾಘವೇಂದ್ರ ವಂದಿಸಿದರು.