ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಯ ಅತಿಕ್ರಮಣದಾರರ ರಕ್ಷಣೆಗೆ ಸದಾ ಸಿದ್ದನಿದ್ದು, ಯಾರು ಕೂಡ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಮಾಸ್ತಿಹಕ್ಕಲಿನಲ್ಲಿ ಭಾನುವಾರ ನಡೆದ ವನಮಹೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕ್ಷೇತ್ರದಲ್ಲಿರುವ ಅತಿಕ್ರಮಣದಾರರಿಗೆ ಪಟ್ಟಾ ನೀಡುವವರೆಗೆ ನನ್ನ ಅಧಿಕಾರದ ವ್ಯಾಪ್ತಿ ಮೀರಿ ರಕ್ಷಣೆ ಕೊಡಲು ನಾನು ಸಿದ್ದನಿದ್ದೇನೆ. ಯಾರು ಕೂಡ ನಿಮ್ಮನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುತ್ತೇನೆ ಎಂದರು.
ಕ್ಷೇತ್ರದ ಶಾಸಕರಾದವರು ಎಲ್ಲಾ ಸಮುದಾಯದವರ ಪ್ರತಿನಿಧಿಯಾಗಿರಬೇಕು. ನಮಗಾಗಿ ಶ್ರಮಪಟ್ಟ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರ ಶ್ರಮಕ್ಕೆ ಬೆಲೆ ಕೊಟ್ಟಾಗ ಮಾತ್ರ ವಿಶ್ವಾಸ ಗಳಿಸಲು ಸಾಧ್ಯ. ಕ್ಷೇತ್ರದ ಸಾಕಷ್ಟು ಕಡೆ ರಸ್ತೆಗಳಾಗಬೇಕಿದೆ. ನಿಮ್ಮ ನಂಬಿಕೆ ಹಾಗೂ ವಿಶ್ವಾಸ ಗಳಿಸುವುದರ ಜತೆಗೆ ಈ ಭಾಗದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯವನ್ನು ಹಂತ ಹಂತವಾಗಿ ಕಲ್ಪಿಸೋಣ ಎಂದ ಅವರು, ಪ್ರತಿಯೊಂದು ರೈತ ಕುಟುಂಬಗಳು ತಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಂಘಟಕ ಹಾಗೂ ವಕೀಲ ಜಿ.ಟಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಮೂವತ್ತು ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾದ ಪ್ರದೇಶ ಇದಾಗಿದೆ. ತುರ್ತು ಅಗತ್ಯವಾದ ಕೆಲಸಗಳು ಊರಲ್ಲಿ ಸಾಕಷ್ಟಿವೆ. ಬಂದಂತ ಅನುದಾನಗಳು ವಾಪಸ್ ಆಗಿವೆ. ಸೇತುವೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಈ ವೇಳೆ ಗ್ರಾಪಂ ಸದಸ್ಯರಾದ ಸುರೇಶ ನಾಯ್ಕ, ಲಲಿತಾ, ನಾಗರಾಜ ಗೌಡ, ಪ್ರಮುಖರಾದ ವಿ.ಎನ್.ನಾಯ್ಕ, ಸಿ.ಆರ್.ನಾಯ್ಕ, ಜಿ.ಟಿ.ನಾಯ್ಕ ಗೋಳಗೋಡ, ಐ.ಕೆ.ನಾಯ್ಕ ಸುಂಗೊಳ್ಳಿಮನೆ ಬಿ.ಎಲ್.ನಾಯ್ಕ, ರಾಮಾ ನಾಯ್ಕ, ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.