‘ಕುರ್ಚಿ’ಗಾಗಿ ಕುರ್ಚಿಯಲ್ಲೇ ಕಿತ್ತಾಡಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು: ವಿಡಿಯೋ ವೈರಲ್‌

ಮುಂಬೈ (ಜೂನ್ 18, 2023): ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕುರ್ಚಿ ಗದ್ದಲ ಜೋರಾಗಿದೆ. ನಾಯಕರೊಬ್ಬರನ್ನು ಕುರ್ಚಿಯಿಂದ ಇಳಿಸಲು ಕುರ್ಚಿಗಳಲ್ಲೇ ಜೋರಾಗಿ ಗದ್ದಲ ನಡೆದಿದೆ. ಸಭೆಯಲ್ಲಿ ಜನರ ಮಾತಿಗಿಂತ ದೈಹಿಕ ಘರ್ಷಣೆ, ಕುರ್ಚಿಯಲ್ಲಿ ಹೊಡೆದಾಟ, ಕುರ್ಚಿಯ ಹಾರಾಟಗಳೇ ಸದ್ದು ಮಾಡಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗಳ ವಿಡಿಯೋ ಸಹ ಸದ್ದು ಮಾಡಿದೆ. 

ಹೌದು, ಯುವ ಕಾಂಗ್ರೆಸ್‌ ಸಭೆ ಹಿಂಸಾತ್ಮಕ ಹೋರಾಟದಲ್ಲಿ ಕೊನೆಗೊಂಡಿದೆ. ಮಹಾರಾಷ್ಟ್ರ ಯುವ ಕಾಂಗ್ರೆಸ್‌ನ ಮುಖ್ಯಸ್ಥ ಕುನಾಲ್ ನಿತಿನ್ ರಾವುತ್ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಎರಡು ಬಣಗಳ ನಡುವಿನ ವಿವಾದದಿಂದ ಘರ್ಷಣೆ ಉಂಟಾಗಿದೆ ಎಂದು ಹೇಳಲಾಗಿದೆ. ನಂತರ ಪರಿಸ್ಥಿತಿಯು ಉಲ್ಬಣಗೊಂಡಿದ್ದು, ಪರಿಣಾಮವಾಗಿ ಎರಡೂ ಗುಂಪುಗಳು ಕುರ್ಚಿ-ಎಸೆದಾಡಿವೆ. ಅಷ್ಟೇ ಅಲ್ಲದೆ, ಕಾರ್ಯಕರ್ತರು ದೈಹಿಕ ಘರ್ಷಣೆಯಲ್ಲಿ ತೊಡಗಿದ್ದು, ಒಬ್ಬರಿಗೊಬ್ಬರು ಪಂಚ್‌ ನೀಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಇನ್ನೊಂದೆಡೆ, ಮುಂಬೈನ ದಾದರ್ ತಿಲಕ್ ಭವನದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಗಲಾಟೆ ನಡೆದಿರುವ ಹಿನ್ನೆಲೆ ಬಿ.ವಿ.ಶ್ರೀನಿವಾಸ್‌ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದ್ದಾರೆ. ಸಭೆಯ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲು ಉದ್ದೇಶಿಸಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಬಿ.ವಿ. ಶ್ರೀನಿವಾಸ್ ಅವರು ಯಾವುದೇ ಹೇಳಿಕೆ ನೀಡದೆ ನಿರ್ಗಮಿಸಿದರು ಎಂದು ವರದಿಯಾಗಿದೆ. 

ಇನ್ನು, ಈ ವೈರಲ್‌ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಯಾವಾಗಲೂ ಕಿತ್ತಾಟ ನಡೆಯುತ್ತಲೇ ಇರುತ್ತದೆ. ರಾಜಸ್ಥಾನ, ಛತ್ತೀಸ್‌ಘಡ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಈಗ ಮಹಾರಾಷ್ಟ್ರದಲ್ಲಿ ಗಲಾಟೆ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಜೈ ಹಿಂದ್‌ ಟ್ವೀಟ್‌ ಮಾಡಿದ್ದಾರೆ.

‘’ಮುಂಬೈನಲ್ಲಿ ಯುವ ಕಾಂಗ್ರೆಸ್‌ ಸಭೆ ಹಿಂಸಾತ್ಮಕ ಜಗಳದಿಂದ ಕೊನೆಯಾಗಿದೆ. ಚೇರ್‌ಗಳ ಎಸೆದಾಟವೂ ನಡೆದಿದೆ. ಐಎನ್‌ಸಿ ಅಂದರೆ ಐ ನೀಡ್‌ ಚೇರ್‌ (ನನಗೆ ಕುರ್ಚಿ ಬೇಕು) ಅಥವಾ ಐ ನೀಡ್‌ ಟು ಥ್ರೋ ಚೇರ್‌ (ನಾನು ಕುರ್ಚಿಯನ್ನು ಎಸೆಯಬೇಕು) ಎಂದಾಗಿದೆ. ಕಾಂಗ್ರೆಸ್‌ನಲ್ಲಿ ಯಾವಾಗಲೂ ಕುರ್ಚಿಗಾಗಿ ಜಗಳ ನಡೆಯುತ್ತಿರುತ್ತದೆ, ಕುರ್ಚಿಗಳು ಹಾರಾಡುತ್ತಿರುತ್ತದೆ. ರಾಜಸ್ಥಾನ, ಛತ್ತೀಸ್‌ಘಡ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಈಗ ಮಹಾರಾಷ್ಟ್ರದಲ್ಲಿ ಗಲಾಟೆ ನಡೆದಿದೆ. ಭಾರತ್‌ ಜೋಡೋ ಬಗ್ಗೆ ಮಾತನಾಡುವವರು ಮೊದಲು ಪಕ್ಷದ ಜೋಡಣೆ ಮಾಡಬೇಕು. ಭಾರತೀಯ ಯುವ ರಾಷ್ಟ್ರೀಯ ಕಾಂಗ್ರೆಸ್‌ ಮುಖ್ಯಸ್ಥ ಶ್ರೀನಿವಾಸ್‌ (ಪೊಲೀಸರಿಂದ ದೂರ ಓಡಿ ಹೋಗುವುದರಲ್ಲಿ ಎಕ್ಸ್‌ಪರ್ಟ್‌) ಆಗಿರುವ ಇವರು ಸಹ ಓಡಬೇಕಾಯಿತು’’ ಎಂದೂ ಟ್ವೀಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.