ಲಂಡನ್: ಮೊನ್ನೆಯಷ್ಟೇ ಲಂಡನ್‌ನಲ್ಲಿ ಹೈದರಾಬಾದ್ ಮೂಲದ ಯುವತಿಯೋರ್ವಳನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿತ್ತು. ಈ ಘಟನೆ ಮಾಸುವ ಮೊದಲೇ ಇನ್ನೊಂದು ಇದೇ ರೀತಿಯ ಆಘಾತಕಾರಿ ಘಟನೆ ನಡೆದಿದೆ. ಕೇರಳ ಮೂಲದ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಂಡನ್‌ನ ಸೌತ್‌ಅಮ್ಟನ್ ವೇ ಎಂಬಲ್ಲಿ ಲಂಡನ್ ಪ್ರಜೆಯೋರ್ವ ಈ ಕೃತ್ಯ ನಡೆಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಒಂದು ವಾರದಲ್ಲಿ ಲಂಡನ್‌ನಲ್ಲಿ ನಡೆದ ಮೂರನೇ ಭಾರತೀಯನ ಹತ್ಯೆ ಎಂದು ವರದಿಯಾಗಿದೆ. ಮೃತ ಯುವಕನನ್ನು ಅರವಿಂದ್ ಶಶಿಕುಮಾರ್ ಎಂದು ಗುರುತಿಸಲಾಗಿದ್ದು, ಈ ಪ್ರಕರಣದಲ್ಲಿ ಕೇರಳದವನೇ ಆದ 25 ವರ್ಷದ ಸಲ್ಮಾನ್ ಸಲೀಂ ಎಂಬಾತನ ಮೇಲೆಯೂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಸಲ್ಮಾನ್ ಸಲೀಂ, ಮೃತ ಅರವಿಂದ ಶಶಿಕುಮಾರ್ ಜೊತೆ ಒಂದೇ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಮೃತ ಅರವಿಂದ್ ಕೇರಳದ ಪನಂಪಿಲ್ಲಿ ನಗರದವನಾಗಿದ್ದು, ಸಲ್ಮಾನ್ ಹಾಗೂ ಅರವಿಂದ್ ಇಬ್ಬರೂ ಅಲ್ಲಿ ವಾಸವಿದ್ದ ಇತರ ಮಲೆಯಾಳಿಗಳ ಜೊತೆ ಸಮುದಾಯ ಸೌಲಭ್ಯವನ್ನು ಹಂಚಿಕೊಂಡಿದ್ದರು. ಘಟನೆಯ ಬಳಿಕ ಸಲೀಂ, ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಬಳಿಕ ಆತನನ್ನು ರಿಮಾಂಡ್‌ನಲ್ಲಿ ಇರಿಸಲಾಗಿದ್ದು, ಜೂನ್ 20 ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ.
ಸೌತ್‌ಅಮ್ಟನ್ ವೇಯಲ್ಲಿರುವ ನಿವಾಸದ ಹೊರಗೆ ಚೂರಿಯಿಂದ ಇರಿದ ಗಾಯಗಳೊಂದಿಗೆ ಅರವಿಂದ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ವೇಳೆ ಸ್ಥಳಕ್ಕೆ ತೆರಳಿದ್ದ ಪೊಲೀಸರಿಗೆ ಆತ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದು ಬಂತು. ನಂತರ ಶುಕ್ರವಾರ ನಡೆದ ಮರಣೋತ್ತರ ವರದಿಯಲ್ಲಿ ಎದೆಗೆ ಇರಿದ ಕಾರಣಕ್ಕೆ ಆತ ಮೃತಪಟ್ಟಿದ್ದಾನೆ ಎಂದು ವರದಿ ಬಂದಿತ್ತು. ವಿದ್ಯಾರ್ಥಿ ವೀಸಾದಲ್ಲಿ ಲಂಡನ್‌ಗೆ ಬಂದಿದ್ದ ಶಶಿಕುಮಾರ್ ಕಳೆದ 10 ವರ್ಷಗಳಿಂದ ಅಲ್ಲೇ ನೆಲೆಸಿದ್ದರು. ಅರವಿಂದ್ ಕುಟುಂಬಕ್ಕೆ ಈ ವಿಚಾರ ತಿಳಿಸಲಾಗಿದ್ದು,
ಇದೊಂದು ಭಯಾನಕ ಘಟನೆ, ಆತನ ಕುಟುಂಬಕ್ಕೆ ನನ್ನ ಸಂತಾಪಗಳು, ಆತನ ಸಾವಿಗೆ ನ್ಯಾಯ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಸೌತ್‌ವಾರ್ಕ್ ಮತ್ತು ಲ್ಯಾಂಬೆತ್‌ನಲ್ಲಿನ ಪೋಲೀಸಿಂಗ್ ಕಮಾಂಡರ್, ಡಿಟೆಕ್ಟಿವ್ ಮುಖ್ಯ ಸೂಪರಿಂಟೆಂಡೆಂಟ್ ಸೆಬ್ ಅಡ್ಜೆಅಡೋಹ್ ಹೇಳಿದ್ದಾರೆ. ಇದೇ ವಾರದ ಆರಂಭದಲ್ಲಿ ಇಂಡೋ ಐರಿಷ್ ವಿದ್ಯಾರ್ಥಿ ಗ್ರೇಸಿ ಕುಮಾರ್ ಎಂಬಾಕೆಯನ್ನು ಕೂಡ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.