ಜೋಯಿಡಾ :ಜೋಯಿಡಾ ತಾಲ್ಲೂಕಿನ ಕುಂಬಾರವಾಡದ ಅಂಬೇಡ್ಕರ್ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಪಿಂಚಣಿ ಅದಾಲತ್

ಜೋಯಿಡಾ : ತಾಲ್ಲೂಕಿನ ಕುಂಬಾರವಾಡದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಜುಬೀನ್ ಮಹಾಪಾತ್ರ ಅವರು ಚಾಲನೆಯನ್ನು ನೀಡಿ ಮಾತನಾಡಿ ಅಶಕ್ತರಿಗೆ ಹಾಗೂ ದುರ್ಬಲರಿಗೆ ಆರ್ಥಿಕ ಶಕ್ತಿಯನ್ನು ನೀಡುವ ನಿಟ್ಟಿನಲ್ಲಿ ಇರುವಂತಹ ಅತ್ಯುತ್ತಮವಾದ ಯೋಜನೆಯೆ ಪಿಂಚಣಿ ಯೋಜನೆಯಾಗಿದೆ. ಪಿಂಚಣಿಗೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಪಿಂಚಣಿ ಅದಾಲತ್ ಪರಿಣಾಮಕಾರಿಯಾಗಿದೆ ಎಂದರು. ಪಿಂಚಣಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಸಂಜೀವ್ ಭಜಂತ್ರಿಯವರು ಪಿಂಚಣಿಗೆ ಸಂಬಂಧಪಟ್ಟಂತೆ ವಿವಿಧ ಮಾಹಿತಿಗಳನ್ನು ನೀಡಿ, ಪಿಂಚಣಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಲಿಂಗಪ್ಪ, ಕಂದಾಯ ನಿರೀಕ್ಷಕರಾದ ಗಣಪತಿ ಮೇತ್ರಿ, ಪಿಡಿಓ ಸಂತೋಷ್ ಅಣ್ವೇಕರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತು ಅಧ್ಯಕ್ಷರುಗಳು, ಸದಸ್ಯರುಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮ ಸಹಾಯಕರು ಮತ್ತು 65 ಕ್ಕೂ ಹೆಚ್ಚು ಪಿಂಚಣಿ ಫಲಾನುಭವಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 38 ಪಿಂಚಣಿ ಅರ್ಜಿಗಳನ್ನು ಸ್ವೀಕರಿಸಲಾಯ್ತು. 24 ಪಿಂಚಣಿ ಅರ್ಜಿಗಳಿಗೆ ಸ್ಥಳದಲ್ಲೆ ಜುಬೀನ್ ಮಹಾಪಾತ್ರ ಅವರು ಮಂಜೂರಾತಿ ಪತ್ರವನ್ನು ನೀಡಿದರು. ಉಳಿದಂತೆ 14 ಅರ್ಜಿಗಳ ಪರಿಶೀಲನಾ ಕಾರ್ಯ ನಡೆದಿದ್ದು, ಅತೀ ಶೀಘ್ರದಲ್ಲಿ ಉಳಿದ ಫಲಾನುಭವಿಗಳಿಗೂ ಮಂಜೂರಾತಿ ಆದೇಶ ಪತ್ರವನ್ನು ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳಲು ಜುಬೀನ್ ಮಹಾಪಾತ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉಪನ್ಯಾಸಕರಾದ ಸುನೀಲ್ ಶೆಟ್ಟರ್ ಅವರು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.