ಮೈಸೂರು: ಅವತ್ತು ಮೇ 30. ಮೈಸೂರು ತಾಲ್ಲೂಕಿನ ಕೆಆರ್‌ಎಸ್ ಹಿನ್ನೀರು ಸಾಗರಕಟ್ಟೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದಕ್ಕೆ ಕಾರಣ ಅಲ್ಲಿ ಸಿಕ್ಕ ಮೃತದೇಹ. ಹೌದು ಅಲ್ಲಿನ ಹಳ್ಳದಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಮೃತ ದೇಹ ಪತ್ತೆಯಾಗಿತ್ತು. ದೇಹದಿಂದ ಇನ್ನು ಹೊಗೆ ಬರುತ್ತಿದ್ದು, ಮತ್ತಷ್ಟು ಭಯ ಹುಟ್ಟಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡಡಸಿದ್ರು. ಇದನ್ನು ಅವಲೋಕಿಸಿದ ಪೊಲೀಸರಿಗೆ ಯಾರೋ ಕಿಡಿಗೇಡಿಗಳು ಕೊಲೆ ಮಾಡಿ ನಂತರ ಅಲ್ಲಿ ತಂದು ಸುಟ್ಟು ಹಾಕಿರುವುದು ಗೊತ್ತಾಗುತಿತ್ತು. ಮೇಲ್ನೋಟಕ್ಕೆ ಇದೊಂದು ಕೊಲೆ ಅನ್ನೋದು ಗೊತ್ತಾಗಿತ್ತಾದರೂ ಆದ್ರೆ, ಮೃತದೇಹ ಗುರುತು ಸಿಗದಂತೆ ಸುಟ್ಟು ಕರಕಲಾಗಿತ್ತು. ಮೃತರಾದವರ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು.
ಇನ್ನು ಪ್ರಕರಣ ದಾಖಲಿಸಿಕೊಂಡ ಇಲವಾಲ ಪೊಲೀಸರು ಶೂನ್ಯದಿಂದಲೇ ತನಿಖೆ ಆರಂಭಿಸಿದರು. ಮೊದಲು ಸುಟ್ಟು ಹೋದ ಮೃತದೇಹದ ಮೇಲಿನ ಗುರುತುಗಳು ಆಭರಣಗಳನ್ನು ಕಲೆ ಹಾಕುವ ಕೆಲಸ ಮಾಡಿದರು. ಆದ್ರೆ, ಯಾವುದೇ ಪ್ರಯೋಜನವಾಗಲಿಲ್ಲ. ಕಾರಣ ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ತದನಂತರ ಪೊಲೀಸರು ಮೈಸೂರು ಜಿಲ್ಲೆಯಲ್ಲಿ ಕಾಣೆಯಾದವರ ಬಗ್ಗೆ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದರು. ಈ ಐಡಿಯಾ ಇಲವಾಲ ಪೊಲೀಸರಿಗೆ ಕೈ ಹಿಡಿದಿತ್ತು. ಅಲ್ಲಿ ಅವತ್ತು ಸಿಕ್ಕ ಮೃತದೇಹದ ಗುರುತು ಪತ್ತೆ ಹಚ್ಚಲು ಸಹಕಾರಿಯಾಯಿತು. ತನಿಖೆ ನಡೆಸುತ್ತಿದ್ದ ಇಲವಾಲ ಪೊಲೀಸರಿಗೆ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ದ ಮಹಿಳೆಯೊಬ್ಬರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಅದರ ಸಂಪೂರ್ಣ ಮಾಹಿತಿ ಕಲೆ ಹಾಕಿದ್ರು. ಕಾಣೆಯಾಗಿದ್ದ ಅಜ್ಜಿ ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನ ಎನ್ನುವುದು ಗೊತ್ತಾಗಿತ್ತು.
ಇನ್ನು 75 ವರ್ಷದ ಸುಲೋಚನ ತಮ್ಮ ಮಗನ ಮನೆಯಲ್ಲಿ ಇದ್ದರು. ಮನೆಯಿಂದ ಹೊರಗೆ ಹೋಗದ ಅಜ್ಜಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದರಿಂದ ಗಾಬರಿಯಾದ ಮನೆಯವರು ಅಜ್ಜಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ರು. ಆದ್ರೆ, ಅಜ್ಜಿ ಪತ್ತೆಯಾಗಿರಲಿಲ್ಲ. ಕೊನೆಗೆ ಅಜ್ಜಿಯ ಮೊಮ್ಮಗ ಸುಪ್ರೀತ್ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ತಮ್ಮ ಅಜ್ಜಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿ, ತಮ್ಮ ಅಜ್ಜಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದ.
ಇನ್ನು ಸಂಪೂರ್ಣ ಮಾಹಿತಿ ಪಡೆದ ಪೊಲೀಸರಿಗೆ ಮೃತದೇಹ ಅಜ್ಜಿ ಸುಲೋಚನ ಅವರದ್ದೇ ಅನ್ನೋದು ಬಹುತೇಕ ಖಚಿತವಾಗಿತ್ತು. ಆದ್ರೆ, ಈ ಇಳಿ ವಯಸ್ಸಿನ ಅಜ್ಜಿಯನ್ನು ಯಾರು ಕೊಲೆ ಮಾಡಿದರು? ಏಕೆ ಕೊಲೆ ಮಾಡಿದರು? ಅನ್ನೋದು ತಲೆ ನೋವಾಗಿತ್ತು. ಇನ್ನು ಅಜ್ಜಿಯ ಮನೆಯವರೆಲ್ಲಾ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಅಜ್ಜಿಯ ಮೊಮ್ಮಗ ಸುಪ್ರೀತ್ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಮಗ ಪ್ರತಿಷ್ಟಿತ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಸೊಸೆ ಶಿಕ್ಷಕಿ. ಅಜ್ಜಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗಲಿ ಇತರ ಸಮಸ್ಯೆಯಾಗಲಿ ಇರಲಿಲ್ಲ. ಇದು ಪೊಲೀಸರಿಗೆ ತಲೆ ನೋವಾಗಿತ್ತು
ಮನೆಯವರನ್ನೇ ವಿಚಾರಣೆ ನಡೆಸಿದ ಪೊಲೀಸರು
ಇನ್ನು ಕೊನೆಗೆ ದಾರಿ ಕಾಣದ ಪೊಲೀಸರು ಮನೆಯವರನ್ನೇ ಒಬ್ಬೊಬ್ಬರನ್ನಾಗಿ ವಿಚಾರಣೆಗೆ ಒಳಪಡಿಸಿದ್ರು. ಈ ವೇಳೆ ಪೊಲೀಸರಿಗೆ ಕೊಲೆಗಾರನ ಸುಳಿವು ಸಿಕ್ಕಿದ್ದು, ಕೊಲೆಗಾರ ಯಾರು ಅಂತಾ ಗೊತ್ತಾದಾಗ ಕೊಲೆಯ ರಹಸ್ಯ ಭೇಧಿಸಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಹೌದು ಯಾಕಂದರೆ ಸುಲೋಚನ ಅವರ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ, ಪ್ರೀತಿಯ ಮೊಮ್ಮಗ ಸುಪ್ರೀತ್.ಅಜ್ಜಿ ಸುಲೋಚನ ಎರಡು ತಿಂಗಳ ಹಿಂದೆಯಷ್ಟೇ ಮಗನ ಜೊತೆ ಬಂದು ವಾಸವಿದ್ದರು. ಅಜ್ಜಿ ಸುಪ್ರೀತ್‌ಗೆ ಸದಾಕಾಲವೂ ಬೈಯ್ಯುವ ಕೆಲಸವನ್ನ ಮಾಡುತ್ತಿದ್ದು, ಅದರಲ್ಲೂ ಬಹಳ ಕೆಟ್ಟ ಪದಗಳಿಂದ ಮೊಮ್ಮಗನನ್ನು ನಿಂದಿಸುತ್ತಿದ್ದರಂತೆ. ಇದರಿಂದ ಸುಪ್ರೀತ್ ಅಜ್ಜಿಯ ವಿರುದ್ದ ಸದಾ ಬುಸುಗುಡುತ್ತಿದ್ದ. ಮೇ 28 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯಲ್ಲಿ ಅಜ್ಜಿ ಸುಲೋಚನ ಒಬ್ಬರೇ ಇದ್ದರು. ಕಾಲೇಜಿಗೆ ಹೋಗಿದ್ದ ಮೊಮ್ಮಗ ಸುಪ್ರೀತ್ ಮನೆಗೆ ವಾಪಸ್ ಆಗಿದ್ದಾನೆ. ಹೊರಗೆ ನಿಂತು ಎಷ್ಟೇ ಬಾಗಿಲು ಬಡಿದರೂ ಅಜ್ಜಿ ಬಂದು ಬಾಗಿಲು ತೆಗಿಯಲಿಲ್ಲ. ಇದರಿಂದ ಕೋಪ ಗೊಂಡಿದ್ದ ಮೊಮ್ಮಗ ಸುಮಾರು ಅರ್ಧ ಗಂಟೆ ನಂತರ ಬಾಗಿಲು ತೆಗೆದ ಅಜ್ಜಿ ಜೊತೆ ಗಲಾಟೆ ಮಾಡಿದ್ದಾನೆ. ಗಲಾಟೆಯಲ್ಲೆ ಆಕೆ ಕಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಭಯಗೊಂಡ ಮೊಮ್ಮಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆಯಿಂದ ತಪ್ಪಿಸಿಕೊಳ್ಳಲು ಕೊರಿಯನ್ ವೆಬ್ ಸೀರಿಸ್ ಪ್ರೇರಣೆ
ನಂತರ ಸ್ನೇಹಿತನ ಕಾರಿನನಲ್ಲಿ ಅಜ್ಜಿ ಮೃತದೇಹ ಸಾಗಿಸಿ ಮೈಸೂರು ತಾಲೂಕಿನ ಸಾಗರಕಟ್ಟೆ ಬಳಿ ಕೆಆರ್‌ಎಸ್ ಅಣೆಕಟ್ಟಿನ ಹಿನ್ನಿರಿನಲ್ಲಿ ಶವ ಎಸೆದು ಸುಟ್ಟು ಹಾಕಿದ್ದ. ಮೃತ ದೇಹ ಸುಡುವುದಕ್ಕೂ ಮುನ್ನ ಅದೇ ಕಾರಿನಲ್ಲಿ ಸುಪ್ರೀತ್ ದಿನವಿಡಿ ಮೈಸೂರು ನಗರ ಸುತ್ತಾಡಿದ್ದ . ಇನ್ನು ಅಚ್ಚರಿ ಅಂದ್ರೆ, ಕಾರಿನಲ್ಲಿ ಶವ ಇಟ್ಟುಕೊಂಡೇ ಮೈಸೂರಿನ ನಜರ್‌ಬಾದ್ ಠಾಣೆಗೆ ತೆರಳಿ ಅಜ್ಜಿ ಮಿಸ್ ಆಗಿರುವ ಬಗ್ಗೆ ಮಿಸ್ಸಿಂಗ್ ದೂರು ದಾಖಲಿಸಿದ್ದ. ನಂತರ ನಗರವೆಲ್ಲಾ ಸುತ್ತಾಡಿ ಸಾಗರ ಕಟ್ಟೆ ಬಳಿ ಮೃತದೇಹ ಬಿಸಾಡಿ, ಪೆಟ್ರೋಲ್ ಹಾಕಿ ಸುಟ್ಟು ಬಂದಿದ್ದ. ಕೊಲೆಯಿಂದ ತಪ್ಪಿಸಿಕೊಳ್ಳಲು ಕೊರಿಯನ್ ವೆಬ್ ಸೀರಿಸ್ ಪ್ರೇರಣೆ ಪಡೆದಿದ್ದ ಆರೋಪಿ ಅಜ್ಜಿ ಸುಲೋಚನ ಅವರನ್ನು ಹತ್ಯೆ ಮಾಡಿ ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಬಾಕ್ಸ್ ನಲ್ಲಿ ಹಾಕಿ ಮನೆಯಿಂದ ಹೊರಗೆ ಸಾಗಿಸಿದ್ದ. ನಂತರ ಕಾರಿನಲ್ಲಿ ಕೆ ಆರ್ ಎಸ್ ಹಿನ್ನೀರು ಪ್ರದೇಶಕ್ಕೆ ಕೊಂಡೊಯ್ದು ಗುಂಡಿಯಲ್ಲಿ ಹಾಕಿ ಶವವನ್ನು ಸುಟ್ಟು ಹಾಕಿದ್ದ.
ಸದ್ಯ ಮೈಸೂರು ಜಿಲ್ಲಾ ಪೊಲೀಸರು ಆರೋಪಿ ಸುಪ್ರೀತ್‌ನನ್ನು ಬಂಧಿಸಿದ್ದಾರೆ. ಒಟ್ಟಾರೆ ಕೋಪದ ಕೈಗೆ ಬುದ್ದಿ ಕೊಟ್ಟರೆ ಎಂತಹ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಸುಪ್ರೀತ್ ಪ್ರಕರಣ ತಾಜಾ ಉದಾಹರಣೆಯಾಗಿದೆ. ಒಂದು ಕ್ಷಣದ ತಪ್ಪಿನಿಂದ ಸುಂದರ ಬದುಕು ನಡಸಬೇಕಿದ್ದ ಸುಪ್ರೀತ್ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದ್ದು ಮಾತ್ರ ದುರಂತ.