22 ವರ್ಷದ ಅನಾಮಿಕಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ಆಕೆಯ ಹೆಸರಿನಲ್ಲಿ ಪಿಂಡದಾನ ಮಾಡಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಅಯಾಝ್ ಎಂಬಾತನನ್ನು ಮದುವೆಯಾದ ತಮ್ಮ ಮಗಳು ಅನಾಮಿಕಾ, ಫಾತೀಮಾ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಮನೆತನದ ಗೌರವಕ್ಕೆ ಧಕ್ಕೆ ಮಾಡಿದ್ದಾಳೆ. ಹಾಗಾಗಿ ತಮ್ಮ ಮಗಳು ತಮ್ಮ ಪಾಲಿಗೆ ತೀರಿಹೋಗಿದ್ದಾಳೆ ಎಂದು ಘೋಷಿಸಲು ಆಕೆಯ ಕುಟುಂಬ ಹಿಂದೂ ಸಂಪ್ರದಾಯದಡಿ ಅಧಿಕೃತ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕನ್ಯಾದಾನದ ಕನಸು ಹೊಂದಿದ್ದ ನಾವು ಪಿಂಡದಾನ ಮಾಡಲು ಮನೆಯವರಿಗೆ ಒತ್ತಾಯಿಸಿದೆವು ಎಂದು ಆಕೆಯ ಸೋದರ ತಿಳಿಸಿದ್ದಾನೆ. ಜೊತೆಗೆ ತಮ್ಮ ಮಗಳು ಲವ್ ಜಿಹಾದ್ ಗೆ ಬಲಿಯಾಗಿ ನಮ್ಮ ಮಾನ ಹಾನಿ ಮಾಡಿದ್ದಾಳೆಂದು ಕುಟುಂಬಸ್ಥರು ಹೇಳಿದ್ದಾರೆ.
ಹುಡುಗಿಯ ತಂದೆ ಛಾಪಿಸಿದ ಶೋಕ ಸಂದೇಶ ವೈರಲ್ ಆಗುತ್ತಿದೆ. ನಮ್ಮ ಮಗಳು ಏ.2 ರಂದು ಕೊನೆಯುಸಿರೆಳೆದಿದ್ದಾಳೆ. ಆಕೆ ಕುಪುತ್ರಿ, ಅವಳಿಗೆ ನರಕದಲ್ಲಿ ಸ್ಥಾನ ಸಿಗಲಿ ಎಂದು ಆಕೆಯ ತಂದೆ ಮತ್ತು ಕುಟುಂಬ ಸದಸ್ಯರು ಪ್ರಾರ್ಥಿಸಿದ್ದಾರೆ.
ಜೂನ್ ನಲ್ಲಿ ಉಜ್ಮಾ ಫಾತಿಮಾ ಅಲಿಯಾಸ್ ಅನಾಮಿಕಾಳ ವಿವಾಹದ ಮದುವೆಯ ಕರೆಯೋಲೆ ಅಯಾಝ್ ನೊಂದಿಗೆ ವೈರಲ್ ಆಗಿತ್ತು. ಆನಂತರ ಆಕೆಯ ತಾಯಯೇ ಇದನ್ನು ಲವ್ ಜಿಹಾದ್ ಎಂದು ಕರೆದು ತಮ್ಮ ಮಗಳನ್ನು ಮರಳಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು. ಆದರೆ, ಮಧ್ಯಪ್ರದೇಶ ಪೊಲೀಸರು ತಾಯಿಯ ಆರೋಪವನ್ನು ತಳ್ಳಿಹಾಕಿದ್ದರು. ಅಲ್ಲದೇ ಇದು ಎರಡು ಕುಟುಂಬಗಳ ನಡುವಿನ ಒಮ್ಮತದ ಸಂಬಂಧ ಎಂದು ಹೇಳಿದ್ದರು