ವಿದ್ಯುತ್‌ ದರ ಏರಿಕೆ: ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ, ಮಹಾರಾಷ್ಟ್ರದತ್ತ ಹೋಗುವ ಎಚ್ಚರಿಕೆ ನೀಡಿದ ಕೈಗಾರಿಕೆಗಳು

ಬೆಳಗಾವಿ: ಒಂದು ಕಡೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಫ್ರೀ ಬಸ್ ಸೇವೆ ಪಡೆದು ಸಂತಸದಲ್ಲಿ ತೇಲಾಡುತ್ತಿದ್ದರೆ ಮತ್ತೊಂದೆಡೆ ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ವಿದ್ಯುತ್‌ ದರ ದಿಢೀರ್‌ ಏರಿಕೆಗೆ ಜನಸಾಮಾನ್ಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗೃಹಜ್ಯೋತಿ ಗ್ಯಾರಂಟಿ ಘೋಷಣೆ ಮಾಡಿದೆ. ಜನಸಾಮಾನ್ಯರಿಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಮತ್ತೊಂದೆಡೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಶಿಫಾರಸು ಮೇರೆಗೆ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಏರಿಸಿವೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುವ ಕೈಗಾರಿಕೋದ್ಯಮಿಗಳು, ಸಣ್ಣ ಪುಟ್ಟ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬೆಳಗಾವಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಣ್ಣ ಕೈಗಾರಿಕೆಗಳ ಸಂಘ ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿವೆ..

ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿವೆ. ಮೊದಲಿನ ಬಿಲ್‌ಗಿಂತ ಮೂರು ಪಟ್ಟು ಬಿಲ್ ಬಂದಿದೆ. ಕೂಡಲೇ ದರವನ್ನ ಸರ್ಕಾರ ಕಡಮೆ ಮಾಡಬೇಕು. ಫ್ರೀ ಕರೆಂಟ್ ಕೊಟ್ಟು ಅದರ ಹೊರೆಯನ್ನ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿವೆ. ಮಹಾರಾಷ್ಟ್ರ ಸರ್ಕಾರ ಎಲ್ಲಾ ಸೌಕರ್ಯ ಕೊಡುತ್ತೇವೆ ಬನ್ನಿ ಅಂತಾ ಆಹ್ವಾ ನೀಡ್ತಿದೆ. ಸರ್ಕಾರ ಸ್ಪಂದಿಸದಿದ್ರೇ ಮಹಾರಾಷ್ಟ್ರದತ್ತ ಮುಖ ಮಾಡುವುದಾಗಿ ಸರ್ಕಾರಕ್ಕೆ ಕೈಗಾರಿಕೆಗಳು ಎಚ್ಚರಿಕೆ ನೀಡಿವೆ. ಇನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.