ಅಂಕೋಲಾ: ಸರ್ಕಾರದ ಯೋಜನೆಗಳು ಜನ ಪರವಾಗಿರುತ್ತವೆ. ಅವುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡುವುದು ಬಿಟ್ಟು ನೈಜ ಫಲಾನುಭವಿಗಳಿಗೆ ಅವುಗಳನ್ನು ತಲುಪಿಸುವಂತಾಗಬೇಕು. ಅರ್ಹರು ಸರ್ಕಾರದ ಯೋಜನೆಗಳನ್ನು ಪಡೆದುಕೊಂಡಾಗ ಆ ಯೋಜನೆಗಳಿಗೆ ಅರ್ಥ ಬರುತ್ತದೆ. ಈ ದಿಶೆಯಲ್ಲಿ ಸರ್ಕಾರ ಇಂದು ಜಾರಿಗೊಳಿಸುತ್ತಿರುವ ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಕೊಡುಗೆಯಾಗಲಿದೆ ಎಂದು ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ್ ಹೇಳಿದರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ರವಿವಾರ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇಂದಿನಿಂದ ಆರಂಭಗೊಂಡಿದೆ. ತಾಲೂಕಿನ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ, ಶಕ್ತಿ ಯೋಜನೆಯ ಮಹಿಳೆಯರಿಗೆ ಶಕ್ತಿ ನೀಡಲಿದೆ. ಉದ್ಯೋಗಸ್ಥ ಮಹಿಳೆಯರಿಗೆ, ದಿನಗೂಲಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪೂರಕವಾಗಿದೆ. ಸ್ತ್ರೀಯರ ಉನ್ನತಿಗೆ ಮತ್ತು ಸಾಮಾಜಿಕ ಸ್ಥಾನಮಾನದ ಹೆಚ್ಚಳಕ್ಕೆ ಇದು ಕೊಡುಗೆ ನೀಡಲಿ ಎಂದರು.
ಅಂಕೋಲಾ ಕೆಎಸ್ಆರ್ಟಿಸಿ ಬಸ್ ಘಟಕ ವ್ಯವಸ್ಥಾಪಕರಾದ ಚೈತನ್ಯ ಗಳಗಟ್ಟಿ ವಿಭಿನ್ನವಾಗಿ ಕಾರ್ಯಕ್ರಮ ಸಂಘಟಿಸಿದ್ದರು. ಸಾರಿಗೆ ಇಲಾಖೆ ಅಧಿಕಾರಿ ಮುಕುಂದ ಕಡೆಮನೆ, ಎ ಡಿ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಪುರಸಭೆ ಸದಸ್ಯರಾದ ಮಂಜುನಾಥ ನಾಯ್ಕ್, ಕಾರ್ತಿಕ ನಾಯ್ಕ, ಶಬ್ಬೀರ್ ಶೇಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ನಾಯ್ಕ, ಮಂಜುಳಾ ವರ್ಣೇಕರ್, ಸುರೇಶ್ ಅಸ್ಲಗದ್ದೆ ಮತ್ತಿತರರು ಇದ್ದರು.